ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರಕಾರ ನೀಡಿದ ಚೆಕ್ ಬೌನ್ಸ್: ಪುಷ್ಪಾ ಅಮರನಾಥ್ ಆರೋಪ

ಮಂಗಳೂರು, ನ. 6: ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರಕಾರ ನೀಡಿದ 10 ಸಾವಿರ ರೂ. ಪರಿಹಾರದ ಚೆಕ್‌ಗಳು ಬೌನ್ಸ್ ಆಗಿವೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಸರಕಾರ ಆಪರೇಶನ್ ಕಮಲಕ್ಕೆ ಹಣ ವ್ಯಯ ಮಾಡುತ್ತಿದೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಬಿಜೆಪಿಗೆ ಆಪರೇಶನ್ ಕಮಲ ಮಾಡಲು ಬೇಕಾದಷ್ಟು ಹಣವಿದ್ದರೂ ಪ್ರವಾಹ ಸಂತ್ರಸ್ತರಿಗೆ ನೀಡಲು ಬಳಿ ಹಣವಿಲ್ಲ ಎನ್ನುತ್ತಿರುವುದು ವಿಪರ್ಯಾಸ. ರಾಜ್ಯದ ಬಹುತೇಕ ಜಿಲ್ಲೆಗಳ ಜನತೆ ಪ್ರವಾಹದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸಿದೆ ಎಂದರು.
ಬಿಜೆಪಿಯವರು ಶೌಚಾಲಯ ಕಟ್ಟಬೇಕು ಎನ್ನುತ್ತಾರೆ. ಹಾಗೆ ಹೇಳುವವರು ಒಮ್ಮೆ ಉತ್ತರ ಕರ್ನಾಟಕಕ್ಕೆ ಹೋಗಿ ನೋಡಲಿ. ಅಲ್ಲಿ ವಾಸಕ್ಕೆ ಮನೆಗಳೇ ಇಲ್ಲ. ಇನ್ನು ಶೌಚಾಲಯ ಎಲ್ಲಿ ಕಟ್ಟಬೇಕು ಎಂದು ಪ್ರಶ್ನಿಸಿದ ಪುಷ್ಪಾ ಅಮರನಾಥ್, 2013ರಲ್ಲಿ ನರೇಂದ್ರ ಮೋದಿ ವಿಧಾನಸಭೆ ಮತ್ತು ಸಂಸತ್‌ನಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ಭರವಸೆ ನೀಡಿದ್ದರು. ಆದರೆ ಅದು ಹುಸಿಯಾಗಿದೆ. ಮಹಿಳಾ ಮೀಸಲಾತಿ ಬಿಡಿ, ಮಹಿಳೆಯರಿಗೆ ಭದ್ರತೆಯನ್ನು ಒದಗಿಸಲೂ ಬಿಜೆಪಿ ಸರಕಾರದಿಂದ ಸಾಧ್ಯವಾಗಿಲ್ಲ. ಮೋದಿ ಆಡಳಿತದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಿದೆ. ಬೇಟಿ ಬಚಾವೊ ಸ್ಲೋಗನ್‌ನ್ನು ಜಾಹೀರಾತು, ಟಿವಿಗಳಲ್ಲಿ ಪ್ರದರ್ಶನಕ್ಕೆ ಮಾತ್ರ ಬಳಸಿಕೊಂಡು ಮಹಿಳೆಯರ ಕೈಗೆ ದೊಡ್ಡ ಚಿಪ್ಪು ನೀಡಿದರು ಎಂದರು.
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೇರೆ ಪಕ್ಷಗಳಿಗೆ ಹೋಲಿಸಿದರೆ ವಿದ್ಯಾವಂತ ಹೆಣ್ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅವರು ಹೆಚ್ಚು ನ್ಯಾಯಯುತವಾಗಿ ಜನರ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ನಾಯಕಿಯರಾದ ಶಾಲೆಟ್ ಪಿಂಟೊ, ಸುರೇಖಾ, ಸವಿತಾ ರಮೇಶ್ ಮತ್ತಿತರರು ಉಪಸ್ಥಿರಿದ್ದರು.
ರಾಜ್ಯ ಸರಕಾರ ರೈತರ ಸಮಸ್ಯೆಗೆ ಸ್ಪಂದಿಸಲಿಪ್ರವಾಹದಿಂದಾಗಿ ಅತಿ ಹೆಚ್ಚು ತೊಂದರೆಗೆ ಒಳಗಾದವರು ರೈತರು. ತೀವ್ರ ಬೆಳೆಹಾನಿಯಿಂದ ಕಂಗಾಲಾದವರಿಗೆ ಯಾವುದೇ ರಾಜ್ಯ ಸರಕಾರ ಪರಿಹಾರ ನೀಡಿಲ್ಲ. ತಕ್ಷಣ ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಾನೆಟ್ ಡಿಸೋಜ ಆಗ್ರಹಿಸಿದರು.38 ಸಾವಿರ ಕೋ.ರೂ. ಪ್ರವಾಹ ನಷ್ಟ ಸಂಭವಿಸಿದ್ದರೂ ಕೇಂದ್ರ ಸರಕಾರ ಕೇವಲ 1,200 ಕೋ.ರೂ.ಗಳನ್ನು ಮಂಜೂರುಮಾಡಿದೆ. ಉಳಿದ ಮೊತ್ತವನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಜಾನೆಡ್ ಡಿಸೋಜ ಒತ್ತಾಯಿಸಿದರು.







