ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತವಾಗಿ ಟಿಪ್ಪು ಜಯಂತಿ ಆಚರಿಸುವುದಿಲ್ಲ: ಸಿದ್ದರಾಮಯ್ಯ

ಮಂಗಳೂರು, ನ. 6: ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜಯಂತಿಯನ್ನು ಅಧಿಕೃತವಾಗಿ ಆಚರಿಸುವುದಿಲ್ಲ. ಆದರೆ, ಸಂಘ ಸಂಸ್ಥೆಗಳು ಟಿಪ್ಪು ಜಯಂತಿ ಆಚರಿಸಿದರೆ ಅದರಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ಮನಪಾ ಚುನಾವಣೆಗೆ ಸಂಬಂಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿ ರಾಜ್ಯ ಹೈಕೋರ್ಟ್ ನೀಡಿರುವ ನಿರ್ದೇಶನಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪುಣ್ಯಪುರುಷರ ಜಯಂತಿ ಆಚರಣೆಯನ್ನು ಯಾವತ್ತೂ ವಿರೋಧಿಸುವುದಿಲ್ಲ. ತಾನು ಮುಖ್ಯಮಂತ್ರಿಯಾಗಿದ್ದಾಗಲೇ ಟಿಪ್ಪು ಜಯಂತಿ, ರಾಣಿ ಅಬ್ಬಕ್ಕ ಜಯಂತಿ, ಕೆಂಪೇಗೌಡ ಜಯಂತಿ, ಕೃಷ್ಣ ಜಯಂತಿ, ನಾರಾಯಣ ಗುರು ಜಯಂತಿ ಆಚರಣೆಯನ್ನು ಜಾರಿಗೊಳಿಸಿದೆವು. ಆದರೆ, ಬಿಜೆಪಿಗರು ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿಯನ್ನು ವಿರೋಧಿಸಿದರು. ಅಲ್ಲದೆ ಟಿಪ್ಪು ಜಯಂತಿ ರದ್ದತಿಗೆ ಮುಂದಾದರು. ಇದೀಗ ರಾಜ್ಯ ಹೈಕೋರ್ಟ್ ಟಿಪ್ಪು ಜಯಂತಿ ಆಚರಣೆ ಮಾಡಿ ಅಥವಾ ಮಾಡಬೇಡಿ ಎಂದಿಲ್ಲ. ಇಷ್ಟವಿದ್ದವರು ಮಾಡಬಹುದು. ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ, ಅಂಬೇಡ್ಕರ್, ನೆಹರೂ, ಇಂದಿರಾ ಗಾಂಧಿ, ರಾಜೀವ್‌ಗಾಂಧಿ ಜಯಂತಿಯನ್ನು ಆಚರಿಸುವ ಪರಿಪಾಠವಿದೆ. ಬೇರೆ ಯಾವ ಜಯಂತಿಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಿಲ್ಲ. ಹಾಗಾಗಿ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆಯ ಪ್ರಮೇಯವೇ ಬರುವುದಿಲ್ಲ ಎಂದರು.
ಬಿಜೆಪಿಯು ದೇಶಾದ್ಯಂತ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ಮಾಡಿಸುತ್ತಿವೆ. ಆ ಮೂಲಕ ಕಾಂಗ್ರೆಸ್ ನಾಯಕರ ಮಾನಸಿಕ ಸ್ಥೈರ್ಯ ಕುಸಿಯುವ ಪ್ರಯತ್ನ ಮಾಡುತ್ತಿದೆ. ಆದರೆ, ಅದರಲ್ಲಿ ಯಶಸ್ವಿಯಾಗುವುದಿಲ್ಲ ಎಂದ ಸಿದ್ದರಾಮಯ್ಯ, ಉಪಚುನಾವಣೆಯಲ್ಲಿ ಬಿಜೆಪಿ 8 ಸ್ಥಾನವನ್ನೂ ಗೆಲ್ಲುವುದಿಲ್ಲ. ಯಡಿಯೂರಪ್ಪ ಸರಕಾರವನ್ನು ಸ್ವತ: ಬಿಜೆಪಿಗರೇ ಉರುಳಿಸುತ್ತಾರೆ. ಯಡಿಯೂರಪ್ಪ ಮತ್ತು ಅಮಿತ್ ಶಾ ಮಧ್ಯೆ ಬಿಕ್ಕಟ್ಟು ಸೃಷ್ಟಿಸಲೇ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ್ದನ್ನು ಲೀಕ್ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಡಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದಿನ್ ಬಾವಾ, ಜೆ.ಆರ್. ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಬಾವಾ, ಯು.ಬಿ.ವೆಂಕಟೇಶ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಾನೆಟ್ ಡಿಸೋಜ, ಪಕ್ಷದ ಮುಖಂಡರಾದ ಎಂ.ಎ. ಗಫೂರ್, ಸವಿತಾ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.







