ಎಚ್1-ಬಿ ವೀಸಾಗಳ ನಿರಾಕರಣೆಯಲ್ಲಿ ಭಾರೀ ಏರಿಕೆ: ಭಾರತೀಯ ಐಟಿ ಕಂಪನಿಗಳಿಗೆ ತೀವ್ರ ಸಂಕಷ್ಟ

ವಾಷಿಂಗ್ಟನ್,ನ.6: ಟ್ರಂಪ್ ಆಡಳಿತದ ಕಟ್ಟುನಿಟ್ಟಿನ ವಲಸೆ ನೀತಿಗಳಿಂದಾಗಿ ಎಚ್1-ಬಿ ವೀಸಾವನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳು ಭಾರೀ ಸಂಖ್ಯೆಯಲ್ಲಿ ತಿರಸ್ಕೃತಗೊಂಡಿದ್ದು,ಈ ಪೈಕಿ ಪ್ರಮುಖ ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ) ಸಂಸ್ಥೆಗಳಿಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಎಚ್1-ಬಿ ವೀಸಾಗಳನ್ನು ನಿರಾಕರಿಸಲಾಗಿದೆ ಎಂದು ಅಮೆರಿಕದ ಚಿಂತನ ಚಿಲುಮೆ ನ್ಯಾಷನಲ್ ಫೌಂಡೇಷನ್ ಫಾರ್ ಅಮೆರಿಕನ್ ಪಾಲಿಸಿ ನಡೆಸಿರುವ ಅಧ್ಯಯನವು ಬೆಟ್ಟು ಮಾಡಿದೆ.
ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯು ಒದಗಿಸಿದ ಅಂಕಿಅಂಶಗಳ ಆಧಾರದಲ್ಲಿ ನಡೆಸಲಾದ ಅಧ್ಯಯನವು, ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಎಚ್1-ಬಿ ವೀಸಾಗಳ ನಿರಾಕರಣೆ ಪ್ರಮಾಣವು 2015ರಲ್ಲಿದ್ದ ಕೇವಲ ಶೇ.6ರಿಂದ ಹಾಲಿ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ.24ಕ್ಕೇರಿದೆ ಎಂದು ತೋರಿಸಿದೆ.
ಎಚ್1-ಬಿ ವೀಸಾ ವಲಸೆಯೇತರ ವೀಸಾ ಆಗಿದ್ದು,ಸೈದ್ಧಾಂತಿಕ ಅಥವಾ ತಾಂತ್ರಿಕ ನೈಪುಣ್ಯವನ್ನು ಬೇಡುವ ವಿಶೇಷ ಹುದ್ದೆಗಳಿಗೆ ವಿದೇಶಿಯರನ್ನು ನೇಮಕಗೊಳಿಸಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಅವಕಾಶವನ್ನು ನೀಡುತ್ತದೆ. ತಂತ್ರಜ್ಞಾನ ಕಂಪನಿಗಳು ಪ್ರತಿ ವರ್ಷ ಭಾರತ ಅಥವಾ ಚೀನಾದಂತಹ ದೇಶಗಳಿಂದ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಈ ವೀಸಾವನ್ನು ಅವಲಂಬಿಸಿವೆ.
ಭಾರತೀಯ ಐಟಿ ಕಂಪನಿಗಳಿಗೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಚ್1-ಬಿ ವೀಸಾ ಅರ್ಜಿಗಳು ತಿರಸ್ಕೃತಗೊಂಡಿರುವುದು ಟ್ರಂಪ್ ಆಡಳಿತವು ಭಾರತೀಯ ಕಂಪನಿಗಳನ್ನು ಅನಗತ್ಯವಾಗಿ ಗುರಿಯಾಗಿಸಿಕೊಂಡಿದೆ ಎಂಬ ಆರೋಪವನ್ನು ಪುಷ್ಟೀಕರಿಸುತ್ತಿದೆ.
ಉದಾಹರಣೆಗೆ 2015ರಲ್ಲಿ ಅಮೆಝಾನ್,ಮೈಕ್ರೋಸಾಫ್ಟ್,ಇಂಟೆಲ್ ಮತ್ತು ಗೂಗಲ್ ಕಂಪನಿಗಳಿಗೆ ಆರಂಭಿಕ ಉದ್ಯೋಗಗಳಿಗಾಗಿ ಎಚ್1-ಬಿ ವೀಸಾ ನಿರಾಕರಣೆ ಪ್ರಮಾಣವು ಕೇವಲ ಶೇ.1ರಷ್ಟಿತ್ತು. 2019ರಲ್ಲಿ ಇದು ಅನುಕ್ರಮವಾಗಿ ಶೇ.6,ಶೇ.8,ಶೇ.7 ಮತ್ತು ಶೇ.3ಕ್ಕೆ ಏರಿಕೆಯಾಗಿದೆ. ಆ್ಯಪಲ್ ಕಂಪನಿಗೆ ಎಚ್1-ಬಿ ವೀಸಾ ನಿರಾಕರಣೆ ಪ್ರಮಾಣ ಈಗಲೂ 2015ರಲ್ಲಿದ್ದ ಶೇ.2ರಲ್ಲಿಯೇ ಇದೆ.
ಇದೇ ಅವಧಿಯಲ್ಲಿ ಎಚ್1-ಬಿ ವೀಸಾ ನಿರಾಕರಣೆಯ ಪ್ರಮಾಣ ಟೆಕ್ ಮಹೀಂದ್ರಕ್ಕೆ ಶೇ.4ರಿಂದ ಶೇ.41ಕ್ಕೆ, ಟಿಸಿಎಸ್‌ಗೆ ಶೇ.6ರಿಂದ ಶೇ.34ಕ್ಕೆ,ವಿಪ್ರೋಕ್ಕೆ ಶೇ.7ರಿಂದ ಶೇ.53ಕ್ಕೆ ಮತ್ತು ಇನ್ಫೋಸಿಸ್‌ಗೆ ಶೇ.2ರಿಂದ ಶೇ.45ಕ್ಕೆ ಏರಿಕೆಯಾಗಿದೆ ಎಂದು ಅಧ್ಯಯನವು ತೋರಿಸಿದೆ.
ಅಸೆಂಚರ್,ಕ್ಯಾಪ್‌ಜೆಮಿನಿ ಇತ್ಯಾದಿಗಳು ಸೇರಿದಂತೆ ಇತರ ಅಮೆರಿಕ ಕಂಪನಿಗಳಿಗೆ ವೃತ್ತಿಪರ ಅಥವಾ ಐಟಿ ಸೇವೆಗಳನ್ನೊದಗಿಸುವ ಕನಿಷ್ಠ 12 ಕಂಪನಿಗಳಿಗೆ ಎಚ್1-ಬಿ ವೀಸಾ ನಿರಾಕರಣೆ ಪ್ರಮಾಣ ಹಾಲಿ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಶೇ.30ಕ್ಕೂ ಹೆಚ್ಚಿದೆ.ಈ ಪೈಕಿ ಹೆಚ್ಚಿನ ಕಂಪನಿಗಳಿಗೆ 2015ರಲ್ಲಿ ವೀಸಾ ನಿರಾಕರಣೆ ಪ್ರಮಾಣ ಶೇ.2ರಿಂದ ಶೇ.7ರಷ್ಟಿತ್ತು ಎಂದು ಅಧ್ಯಯನ ವರದಿಯು ತಿಳಿಸಿದೆ.
ಎಚ್1-ಬಿ ವೀಸಾಗಳ ನವೀಕರಣ ಅರ್ಜಿಗಳ ನಿರಾಕರಣೆಯಲ್ಲಿಯೂ ಭಾರತೀಯ ಐಟಿ ಕಂಪನಿಗಳನ್ನು ಮುಖ್ಯ ಗುರಿಯನ್ನಾಗಿಸಿಕೊಳ್ಳಲಾಗಿದೆ. 2015-2019ರ ಅವಧಿಯಲ್ಲಿ ನವೀಕರಣ ಅರ್ಜಿಗಳ ನಿರಾಕರಣೆ ಪ್ರಮಾಣ ಟೆಕ್ ಮಹೀಂದ್ರಾಕ್ಕೆ ಶೇ.2ರಿಂದ ಶೇ.16ಕ್ಕೆ,ವಿಪ್ರೋಕ್ಕೆ ಶೇ.4ರಿಂದ ಶೇ.19ಕ್ಕೆ ಮತ್ತು ಇನ್ಫೋಸಿಸ್‌ಗೆ ಶೇ.1ರಿಂದ ಶೇ.29ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅಮೆರಿಕದ ಕಂಪನಿಗಳಿಗೆ ಸಂಬಂಧಿಸಿದಂತೆ ನವೀಕರಣ ಅರ್ಜಿಗಳ ನಿರಾಕರಣೆ ಪ್ರಮಾಣ ಕಡಿಮೆ ಮಟ್ಟದಲ್ಲಿದೆ. ಅಮೆಝಾನ್‌ಮತ್ತು ಇಂಟೆಲ್‌ಗೆ ಶೇ.1ರಿಂದ ಶೇ.3ಕ್ಕೆ ಏರಿದ್ದರೆ,ಗೂಗಲ್‌ಗೆ ಶೇ.0.4ರಿಂದ ಶೇ.1ಕ್ಕೆ ಏರಿಕೆಯಾಗಿದೆ. ಮೈಕ್ರೋಸಾಫ್ಟ್‌ಗೆ ಶೇ.2 ಮತ್ತು ಆ್ಯಪಲ್‌ಗೆ ಶೇ.1 ಪ್ರಮಾಣದಲ್ಲಿಯೇ ಉಳಿದುಕೊಂಡಿದೆ.
2010-2015ರ ಅವಧಿಯಲ್ಲಿ ಹೊಸ ಎಚ್1-ಬಿ ವೀಸಾ ಅರ್ಜಿಗಳ ನಿರಾಕರಣೆ ಪ್ರಮಾಣ ಎಂದೂ ಶೇ.8ನ್ನು ಮೀರಿರಲಿಲ್ಲ,ಇಂದು ಅದು ಮೂರು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಬೆಟ್ಟು ಮಾಡಿದೆ.
ಟ್ರಂಪ್ ಆಡಳಿತದ ನೀತಿಯಿಂದಾಗಿ ಉನ್ನತ ಕೌಶಲ್ಯವಿರುವ ವಿದೇಶಿಯರನ್ನು ನೇಮಿಸಿಕೊಳ್ಳಲು ಅಸಮರ್ಥ ಗೊಂಡಿರುವ ಅಮೆರಿಕದ ಕಂಪನಿಳು ಈಗ ತಮ್ಮ ಸಾಗರೋತ್ತರ ನೇಮಕಗಳನ್ನು ಹೆಚ್ಚಿಸುತ್ತಿವೆ. ಇದರ ಪರಿಣಾಮವಾಗಿ ವಿದೇಶಿ ಉದ್ಯೋಗಿಗಳಿಂದ ಹೆಚ್ಚಿನ ಆವಿಷ್ಕಾರಗಳು ಇತರ ದೇಶಗಳಲ್ಲಿ ನಡೆಯುತ್ತಿವೆ ಮತ್ತು ಆ ದೇಶಗಳು ಇದರ ಲಾಭವನ್ನು ಪಡೆಯುತ್ತಿವೆ ಎಂದು ಅಧ್ಯಯನವು ಹೇಳಿದೆ.







