ಧರ್ಮ ಹಿಂಸೆಯು ಅನೀತಿ, ಅಧರ್ಮ, ಅನ್ಯಾಯ ಅಲ್ಲ: ಚಕ್ರತೀರ್ಥ

ಉಡುಪಿ, ನ.6: ಧರ್ಮ ಹಿಂಸೆ ಎಂಬುದು ಅನ್ಯಾಯ, ಅನೀತಿ, ಅಧರ್ಮ ಅಲ್ಲ. ಕೆಲವು ಬಾರಿ ಹಿಂಸೆ ಮಾಡಬೇಕಾಗುತ್ತದೆ. ಆ ಮೂಲಕ ಶಾಂತಿಯನ್ನು ಸ್ಥಾಪಿಸಬೇಕಾಗುತ್ತದೆ. ಧರ್ಮ ಪಾಲನೆ ಮಾಡದಿದ್ದರೆ ಅರಾಜಕತೆ ತಾಂಡ ವಾಡುತ್ತದೆ ಎಂದು ಪತ್ರಕತರ್ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
ಉಡುಪಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ತತ್ವಸಂಶೋಧನಾ ಸಂಸತ್ ನೇತೃತ್ವದಲ್ಲಿ ನಿನ್ನಾ ಒಲುಮೆಯಿಂದ ಪ್ರತಿಷ್ಠಾನ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಿದ ಸಮಗ್ರ ಶ್ರೀಮಹಾಭಾರತ ಸಮರ್ಪಣೋತ್ಸವ ಮತ್ತು ಶ್ರೀವ್ಯಾಸ-ದಾಸ ವಿ’ಜಯ’ ಉತ್ಸವದಲ್ಲಿ ಇಂದು ಮಹಾ ಭಾರತದ ಹಿನ್ನೆಲೆ ಯಲ್ಲಿ ಧರ್ಮಯುದ್ಧ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಭಾರತಕ್ಕೆ ಸ್ವಾತಂತ್ರ ದೊರೆತಿರುವುದು ಕೇವಲ ಅಹಿಂಸೆಯಿಂದ ಮಾತ್ರ ಅಲ್ಲ. ಅದು ಒಂದು ಮಾರ್ಗ ಮಾತ್ರ. ಅದರ ಜೊತೆ ಕ್ರಾಂತಿಕಾರಿಗಳು ಕೂಡ ಸಾಕಷ್ಟು ದುಡಿದಿದ್ದಾರೆ ಎಂದ ಅವರು, ಧರ್ಮ ಮತ್ತು ರಾಜಕಾರಣ ಬೇರೆ ಬೇರೆ ಅಲ್ಲ. ಇದರಲ್ಲಿ ರಾಜಕಾರಣ ಇಲ್ಲದಿದ್ದರೆ ಧರ್ಮ, ಧರ್ಮ ಇಲ್ಲದಿದ್ದರೆ ರಾಜಕಾರಣ ನಾಶವಾಗುತ್ತದೆ ಎಂದರು.
ಬ್ರಾಹ್ಮಣ ಹಾಗೂ ಕ್ಷತ್ರಿಯ ಜ್ಞಾನ ಸರಿ ಸಮಾನವಾಗಿ ಬೆರೆತಾಗ ಮಾತ್ರ ಧರ್ಮ ಆಗಲು ಸಾಧ್ಯ. ಇದರಲ್ಲಿ ಯಾವುದಾದರೂ ಒಂದೂ ಇಲ್ಲದಿದ್ದರು ಅದನ್ನು ಧರ್ಮ ಎಂದು ಹೇಳಲು ಸಾಧ್ಯವಿಲ್ಲ. ಇವು ಎರಡೂ ಇದ್ದರೆ ಮಾತ್ರ ಧರ್ಮವಾಗುತ್ತದೆ. ವಿಚಾರವಾದಿಗಳು ರಾಮಾಯಣ, ಮಹಾಭಾರತದಲ್ಲಿ ತಮಗೆ ಬೇಕಾದ ವಿಚಾರಗಳನ್ನು ಮಾತ್ರ ಪಡೆದು ತಮ್ಮ ಸಿದ್ಧಾಂತವನ್ನು ಬೆಳೆಸಿಕೊಂಡು ಹೊೀದರು ಎಂದು ಅವರು ಟೀಕಿಸಿದರು.
ಮಹಾಭಾರತದ ಸಾಂವಿಧಾನಿಕ ನೀತಿಗಳು ಎಂಬ ವಿಷಯದ ಕುರಿತು ಮಾತನಾಡಿದ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿಸೂರ್ಯ, ಧರ್ಮಕ್ಕಿಂತ ಮಿಗಿಲು ಯಾವುದು ಇಲ್ಲ ಎಂಬುದನ್ನು ಮಹಾಭಾರತ ಸಾರುತ್ತದೆ. ಧರ್ಮದ ಚೌಕಟ್ಟಿನಲ್ಲಿಯೇ ರಾಜ ಆಡಳಿತ ನಡೆಸಬೇಕು. ಅದೇ ರೀತಿ ಸಂವಿಧಾನಕ್ಕಿಂತ ಮೇಲೆ ಯಾರು ಇಲ್ಲ. ಎಲ್ಲರೂ ಸಂವಿಧಾನದ ಅಡಿಯಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ರಾಜಕೀಯ ಸ್ಥಿರತೆ ಇಲ್ಲದಿದ್ದರೆ ಶಾಂತಿ ಇರುವುದಿಲ್ಲ ಎಂಬುದು ಮಹಾಭಾರತದ ಸಂದೇಶವಾಗಿದೆ. ಈ ಮಾತು ಈಗಲೂ ಪ್ರಸ್ತುತ. ಮೂಲ ಮಹಾಭಾರತ ಇಂದು ಕಲಬೆರಕೆಯಾಗಿದೆ ಎಂದು ತಿಳಿಸಿದರು.
‘ಭಗವದ್ಗೀತೆ ಗಾಂಧಿಯ ಅಹಿಂಸಾ ತತ್ವಕ್ಕೆ ವಿರುದ್ಧ’
ಗಾಂಧೀಜಿ ಭಗವದ್ಗೀತೆಯನ್ನು ಮನಸ್ಸಿಗೆ ಸಂಬಂಧಪಟ್ಟ ಕೃತಿ ಹಾಗೂ ವಾಸ್ತವ ದಲ್ಲಿ ಇದು ನಡೆದೇ ಇಲ್ಲ ಎಂಬುದಾಗಿ ಹೇಳಿದ್ದರು. ಭಗವದ್ಗೀತೆಯ ಸಂದೇಶ ಗಳು ಅವರ ಅಹಿಂಸೆಯ ತತ್ವಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಅವರ ಈ ಮಾತನ್ನು ಹೇಳಿದ್ದರು.
ಎಲ್ಲಿಯಾದರೂ ಅವರು ಭಗವದ್ಗೀತೆಯನ್ನು ವಾಸ್ತವ ಎಂದು ಒಪ್ಪಿಕೊಂಡಿದ್ದರೆ ಅದು ಅವರ ಅಹಿಂಸಾ ತತ್ವಕ್ಕೆ ವಿರೋಧವಾಗುತ್ತಿತ್ತು. ಹೀಗಾಗಿ ಅವರು ಅದಕ್ಕೆ ಬೇರೆಯೇ ರೂಪ ಕೊಟ್ಟರು. ಆದರೆ ನಮ್ಮ ಎಲ್ಲ ಶಾಸ್ತ್ರಗಳು ಕ್ಷಾತ್ರ ಈ ದೇಶಕ್ಕೆ ಬೇಕೆ ಬೇಕು ಎಂದು ಹೇಳಿದೆ ಎಂದು ರೋಹಿತ್ ಚಕ್ರತೀರ್ಥ ತಿಳಿಸಿದರು.








