930 ಬಡ ಕುಟುಂಬಗಳಿಗೆ ದ್ರೋಹ ಬಗೆದ ಕಾಂಗ್ರೆಸ್: ಶಾಸಕ ಕಾಮತ್ ಆರೋಪ

ಮಂಗಳೂರು, ನ.6: ಶಕ್ತಿನಗರದಲ್ಲಿ ವಸತಿರಹಿತರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಿ+3 ಮಾದರಿಯ 930 ವಸತಿ ಗೃಹಗಳ ನಿರ್ಮಿಸಲು 50 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಮಾಜಿ ಶಾಸಕ ಜೆ.ಆರ್.ಲೋಬೊ ಗುದ್ದಲಿಪೂಜೆ ಮಾಡಿದ್ದರು. ಕಾಮಗಾರಿ ನನೆಗುದಿಗೆ ಬಿದ್ದಿದ್ದು 930 ಬಡ ಕುಟುಂಬಗಳಿಗೆ ಕಾಂಗ್ರೆಸ್ ಪಕ್ಷವು ಅನ್ಯಾಯ ಮಾಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಬಡ ಜನರನ್ನು ತ್ರಿಶಂಕು ಸ್ಥಿತಿಯಲ್ಲಿ ನಿಲ್ಲಿಸಿದ್ದಾರೆ. ಸದ್ಯ ರಾಜ್ಯ ಮತ್ತು ಕೇಂದ್ರ ಸರಕಾರದ ಆದೇಶದ ಪ್ರಕಾರ ಸಂರಕ್ಷಿತ ಅರಣ್ಯ ಪ್ರದೇಶದ ಭೂಮಿಯನು ಬಿಟ್ಟು ಕೊಡುವುದಿಲ್ಲ ಎಂದು ಹೇಳುತ್ತಿದೆ. ಹಾಗಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದರು.
ಈ ಕುರಿತು ಹಲವು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಜಾಗದ ಬದಲಿಗೆ ಜಿಲ್ಲೆಯಲ್ಲಿ ಬೇರೆ ಜಾಗ ಕಲ್ಪಿಸಿ ಕೊಡುವುದಾಗಿ ಕೇಳಿದರೂ ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಸಂರಕ್ಷಿತ ಅರಣ್ಯ ಪ್ರದೇಶದ ಜಾಗ ಬದಲಿಸಿ ಇನ್ನಿತರ ವಿಚಾರಗಳಿಗೆ ಅದನ್ನು ಉಪಯೋಗಿಸಲು ಲೆಕ್ಕ ಕೊಡಬೇಕೆಂದು ಆದೇಶಿಸಿದೆ ಎಂದು ತಿಳಿಸಿದರು.
ಈ ಜಾಗದಲ್ಲಿ ಕಟ್ಟಡ ನಿರ್ಮಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವಸತಿ ರಹಿತ ಕುಟುಂಬಗಳ ಕನಸನ್ನು ನುಚ್ಚು ನೂರು ಮಾಡಿದ್ದು ಕಾಂಗ್ರೆಸ್‌ನ ಸಾಧನೆಯಾಗಿದೆ. ಇಂತಹ ಡೊಂಗಿ ಸಾಧನೆಯ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಇನ್ನೂ ಅದೆಷ್ಟೊ ವಸತಿ ರಹಿತ ಕುಟುಂಬಗಳಿಗೆ ಅನ್ಯಾಯವಾಗಬಹುದು. ಬಿಜೆಪಿಗೇ ಮತ ನೀಡಿ ಎಂದು ಹೇಳಿದರು.
ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಡ ಜನರಿಗೆ ಮಾಡಿದ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ತಾನು ಈಗಾಗಲೇ ಕಣ್ಣೂರಿನಲ್ಲಿ ಏಳು ಎಕರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಆರ್‌ಟಿಸಿ ಕಾಲಂ 9ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹೆಸರಿನಲ್ಲಿ ಜಮೀನನ್ನು ಕಾಯ್ದಿರಿಸಲು ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದೇನೆ ಎಂದರು.







