ಪ್ರಣಾಳಿಕೆ ಚುನಾವಣಾ ಗಿಮಿಕ್ ಅಲ್ಲ: ದಿನೇಶ್ ಗುಂಡೂರಾವ್

ಮಂಗಳೂರು, ನ.6:ಕಾಂಗ್ರೆಸ್ ಬಿಡುಗಡೆಗೊಳಿಸುವ ಪ್ರಣಾಳಿಕೆಗಳು ಚುನಾವಣಾ ಗಿಮಿಕ್ ಅಲ್ಲ. ಆಡಳಿತಾವಧಿಯಲ್ಲಿ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುತ್ತೇವೆ. ಯಾವುದೇ ಸ್ಪಷ್ಟ ನಿಲುವುಗಳಿಲ್ಲದ ಬಿಜೆಪಿಗರ ಹಾಗೇ ಸುಳ್ಳಿನ ಕಂತೆಯ ಪ್ರಣಾಳಿಕೆಯನ್ನು ಕಾಂಗ್ರೆಸ್ ಯಾವತ್ತೂ ಬಿಡುಗಡೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರು ಮನಪಾ ಚುನಾವಣೆಗೆ ಸಂಬಂಧಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಅವರು ಮಾತನಾಡಿದರು.
ಮಂಗಳೂರು ಮನಪಾ ಚುನಾವಣೆಯ ಫಲಿತಾಂಶವು ರಾಜ್ಯದ ಗಮನ ಸೆಳೆಯಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮನಪಾದ 60 ವಾರ್ಡ್‌ಗಳ ಅಭಿವೃದ್ಧಿಗೆ 3,960 ಕೋ.ರೂ. ಅನುದಾನ ಸರಕಾರ ಬಿಡುಗಡೆ ಮಾಡಿತ್ತು. ಅಲ್ಲದೆ, ಯುಜಿಡಿ, ನಗರೋತ್ಥಾನ, ನೀರಾವರಿ, ಸುರತ್ಕಲ್ ಮಾರುಕಟ್ಟೆ ಎಂದೆಲ್ಲಾ 1,400 ಕೋ.ರೂ. ಅನುದಾನ ನೀಡಿತ್ತು. ಹೀಗೆ ಒಟ್ಟಾರೆ 5 ವರ್ಷದಲ್ಲಿ 5,360 ಕೋ.ರೂ. ಅನುದಾನ ಬಿಡುಗಡೆಗೊಳಿಸಿ ಮಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದೆ. ಪಾಲಿಕೆಗೆ ನಡೆದ 6 ಚುನಾವಣೆಯಲ್ಲಿ 5 ಬಾರಿ ಗೆದ್ದಿದ್ದೇವೆ. ಈ ಬಾರಿ ಮತ್ತೆ ಗೆದ್ದು ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಮತದಾರರು ಮುಂದೆ ಬರಬೇಕು ಎಂದು ದಿನೇಶ್ ಗುಂಡೂರಾವ್ ನುಡಿದರು.







