ಅತ್ಯಾಚಾರ, ಸುಲಿಗೆ ಪ್ರಕರಣ: ಚಿನ್ಮಯಾನಂದ, ವಿದ್ಯಾರ್ಥಿನಿ ವಿರುದ್ಧ ಆರೋಪಪಟ್ಟಿ ದಾಖಲು

ಲಕ್ನೊ, ನ.6: ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಆರೋಪ ಪಟ್ಟಿ ದಾಖಲಿಸಿರುವ ಪೊಲೀಸರು, ಅತ್ಯಾಚಾರ ಆರೋಪದಡಿ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಹಾಗೂ ಅತ್ಯಾಚಾರ ಸಂತ್ರಸ್ತ ವಿದ್ಯಾರ್ಥಿನಿಯ ಹೆಸರನ್ನು ಉಲ್ಲೇಖಿಸಿದ್ದಾರೆ.
ಆರೋಪಪಟ್ಟಿಯನ್ನು ಶಜಹಾನ್‌ಪುರದ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಚಿನ್ಮಯಾನಂದನ ವಿರುದ್ಧದ ಅತ್ಯಾಚಾರ ಆರೋಪ ಹಾಗೂ ವಿದ್ಯಾರ್ಥಿನಿಯ ವಿರುದ್ಧದ ಹಣ ಸುಲಿಗೆಯ ಉದ್ದೇಶದಿಂದ ಬ್ಲಾಕ್‌ಮೇಲ್ ಮಾಡಿರುವ ಆರೋಪ ಸಾಬೀತುಪಡಿಸುವ ಪುರಾವೆಗಳಿವೆ ಎಂದು ಪ್ರಕರಣದ ತನಿಖೆ ನಡೆಸಿರುವ ಉತ್ತರಪ್ರದೇಶ ಪೊಲೀಸ್ ಇಲಾಖೆಯ ವಿಶೇಷ ತನಿಖಾ ದಳ ತಿಳಿಸಿದೆ. ಪ್ರಕರಣವನ್ನು ಎರಡು ಆಯಾಮಗಳಿಂದ ತನಿಖೆ ನಡೆಸಿದ್ದು 105 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 20 ಪುರಾವೆಗಳ ಜೊತೆಗೆ ಡಿಜಿಟಲ್ ಸಾಕ್ಷ ಹಾಗೂ ಕರೆಮಾಹಿತಿ ದಾಖಲೆಗಳನ್ನೂ ಸಂಗ್ರಹಿಸಿದ್ದೇವೆ. 55 ಲಿಖಿತ ಪುರಾವೆ, ದೈನಂದಿನ ವಿಚಾರಣೆಯ ಮಾಹಿತಿಯನ್ನು ಸಂಗ್ರಹಿಸಿ 4,700 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದೇವೆ ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥ ನವೀನ್ ಅರೋರಾ ಹೇಳಿದ್ದಾರೆ.
ಚಿನ್ಮಯಾನಂದನ ವಿರುದ್ಧ ಅತ್ಯಾಚಾರ ಕಾಯ್ದೆಯ ಉಪವಿಧಿಯಡಿ ಪ್ರಕರಣ ದಾಖಲಿಸಲಾಗಿದೆ. ಇದು ‘ದೈಹಿಕ ಸಂಬಂಧದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ’ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಉಪವಿಧಿಯಡಿ ದಾಖಲಿಸಿರುವ ಪ್ರಕರಣದಲ್ಲಿ 5ರಿಂದ 10 ವರ್ಷ ಜೈಲುಶಿಕ್ಷೆ ವಿಧಿಸಬಹುದು. ಆದರೆ ಅತ್ಯಾಚಾರ ಪ್ರಕರಣದಲ್ಲಿ 7 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ.
ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿರುವ 23 ವರ್ಷದ ಕಾನೂನು ವಿದ್ಯಾರ್ಥಿನಿಯ ವಿರುದ್ಧ ಹಣ ಸುಲಿಗೆ ಆರೋಪ ದಾಖಲಾಗಿದ್ದು ಅವರನ್ನೂ ಬಂಧಿಸಲಾಗಿದೆ. ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಸಾಕ್ಷ್ಯ ಮರೆಮಾಚಿರುವ ಆರೋಪವನ್ನು ಹೊರಿಸಲಾಗಿದೆ. ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರ ಎಸಗಿರುವುದನ್ನು ವಿದ್ಯಾರ್ಥಿನಿ ವೀಡಿಯೊ ರೆಕಾರ್ಡಿಂಗ್ ಮಾಡಿಕೊಂಡಿದ್ದು ಇದನ್ನು ಮುಂದಿಟ್ಟು ಚಿನ್ಮಯಾನಂದನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಳು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಹಣ ಸುಲಿಗೆಗೆ ಬಿಜೆಪಿ ಮುಖಂಡ ಡಿಪಿಎಸ್ ರಾಥೋಡ್ ಎಂಬಾತ ನೆರವಾಗಿದ್ದ. ಈತ ಬಳಿಕ ಇಬ್ಬರ ಮಧ್ಯೆ ರಾಜಿ ಮಾತುಕತೆ ನಡೆಸಿ ಚಿನ್ಮಯಾನಂದ ವಿದ್ಯಾರ್ಥಿನಿಗೆ 1.25 ಕೋಟಿ ರೂ. ನೀಡಿದರೆ ಆಕೆಯ ಬಳಿಯಿದ್ದ ವೀಡಿಯೊವನ್ನು ಹಸ್ತಾಂತರಿಸುವ ವ್ಯವಹಾರ ಕುದುರಿಸಿದ್ದ ಎಂದು ತಿಳಿಸಲಾಗಿದೆ.







