ದಿಲ್ಲಿ ರೋಹಿಣಿ ನ್ಯಾಯಾಲಯದಲ್ಲಿ ಪ್ರತಿಭಟನೆ: ಇಬ್ಬರು ವಕೀಲರು ಆತ್ಮಹತ್ಯೆಗೆ ಯತ್ನ

Photo: ANI
ಹೊಸದಿಲ್ಲಿ, ನ. 6: ಪೊಲೀಸರ ವಿರುದ್ಧದ ವಕೀಲರ ಪ್ರತಿಭಟನೆಯ ಮೂರನೇ ದಿನವಾದ ಬುಧವಾರ ಹೊಸದಿಲ್ಲಿಯ ರೋಹಣಿ ನ್ಯಾಯಾಲಯದಲ್ಲಿ ಇಬ್ಬರು ವಕೀಲರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಓರ್ವ ವಕೀಲ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದರು. ಆದರೆ, ಅವರ ಸಹೋದ್ಯೋಗಿಯೋರ್ವರು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ವಕೀಲ ರೋಹಿಣಿ ನ್ಯಾಯಾಲಯ ಕಟ್ಟಡದ ಮೇಲೇರಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದರು. ಬಳಿಕ ಅವರನ್ನು ಸಮಾಧಾನಪಡಿಸಿ ಕೆಳಗೆ ತರಲಾಯಿತು.
ತೀಸ್ಹಝಾರಿ ನ್ಯಾಯಾಲಯದ ಹೊರಭಾಗದಲ್ಲಿ ಬುಧವಾರ ದಿಲ್ಲಿ ಪೊಲೀಸರೊಂದಿಗಿನ ಘರ್ಷಣೆಯ ಬಳಿಕ ಹೊಸದಿಲ್ಲಿಯಲ್ಲಿ ವಕೀಲರು ಕೆಲಸ ತ್ಯಜಿಸಿ ಪ್ರತಿಭಟನೆ ನಡೆಸಿದರು. ನಮ್ಮ ಮೇಲೆ ಗುಂಡು ಹಾರಿಸಿದ ಹಾಗೂ ಲಾಠಿ ಚಾರ್ಜ್ ನಡೆಸಿದ ಪೊಲೀಸರ ವಿರುದ್ಧ ಮಾತ್ರ ನಮ್ಮ ಪ್ರತಿಭಟನೆ. ಅವರು ನಮ್ಮನ್ನು ಬಂಧಿಸುವವರೆಗೆ ನಾವು ಪ್ರತಿಭಟನೆ ನಡೆಸಲಿದ್ದೇವೆ ಎಂದು ವಕೀಲರು ಹೇಳಿದ್ದಾರೆ. ಘರ್ಷಣೆ ಬಳಿಕ ಪೊಲೀಸರ ಮೇಲಿನ ಹಲ್ಲೆ ಖಂಡಿಸಿ ದಿಲ್ಲಿ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು.







