ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ನ.10 ಕ್ಕೆ ಬಹಿರಂಗ ಪ್ರಚಾರ ಅಂತ್ಯ
ಬೆಂಗಳೂರು, ನ.6: ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಹಿರಂಗ ಪ್ರಚಾರವು ಮತದಾನ ದಿನಾಂಕ ಆರಂಭವಾಗುವ ಮುಂಚಿನ 48 ಗಂಟೆಗಳೊಳಗೆ(ನ.10 ಬೆಳಗ್ಗೆ 7 ಗಂಟೆ) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಮತದಾನ ನಡೆಯುವ ದಿನದಂದು ಯಾವುದೇ ವ್ಯಕ್ತಿಯು ಮತದಾನ ಕೇಂದ್ರದಿಂದ ನೂರು ಮೀಟರ್ ಒಳಗೆ ಮತಗಳಿಗಾಗಿ ಪ್ರಚಾರ ಮಾಡುವುದು, ಮತ ಕೋರುವುದು, ಮತದಾರರನ್ನು ಮನವೊಲಿಸುವುದು, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸೂಚನೆ ಅಥವಾ ಚಿಹ್ನೆಯನ್ನು ಪ್ರದರ್ಶಿಸುವುದು ಅಪರಾಧವಾಗಿರುತ್ತದೆ.
ನ.10 ರಂದು ಬೆಳಗ್ಗೆ 7 ಗಂಟೆಯ ನಂತರ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಬೆಂಬಲಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊರಗಿನಿಂದ ಪ್ರಚಾರಕ್ಕಾಗಿ ಬರುವವರು ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ದೂರ ಹೋಗಬೇಕು. ಆ ವ್ಯಾಪ್ತಿಯ ಎಲ್ಲ ಕಲ್ಯಾಣ ಮಂಟಪ, ಸಮುದಾಯ ಭವನ, ಇತರೆ ಸ್ಥಳಗಳಲ್ಲಿ ವಾರ್ಡಿನ ವ್ಯಾಪ್ತಿಗೊಳಪಡದವರಿದ್ದಾರೆ ಎಂದು ತಪಾಸಣೆ ನಡೆಸಬೇಕು ಎಂದು ಆಯೋಗ ತಿಳಿಸಿದೆ.
ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವಾಹನಗಳು ಹಾಗೂ ಜನರ ಸಂಚಾರದ ಮೇಲೆ ನಿಗಾ ವಹಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಸೂಚನೆಗಳನ್ನು ನೀಡಿದೆ.





