ಪಂಚಕುಲ ಹಿಂಸಾಚಾರ: ಹನಿಪ್ರೀತ್‌ಗೆ ಜಾಮೀನು
ಪಂಚಕುಲ, ನ. 6: 2017ರ ಪಂಚಕುಲ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಡೇರಾ ಸಚ್ಚಾ ಸೌದಾದ ವರಿಷ್ಠ ಗುರ್ಮಿತ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್‌ಗೆ ಇಲ್ಲಿನ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.
ಡೇರಾ ವರಿಷ್ಠ ಗುರ್ಮಿತ್ ಅತ್ಯಾಚಾರ ಪ್ರಕರಣಗಳಲ್ಲಿ ದೋಷಿ ಎಂದು ನ್ಯಾಯಾಲಯ ಘೋಷಿಸಿದ ಬಳಿಕ ನಡೆದ ಹಿಂಸಾಚಾರದಲ್ಲಿ 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು ಹಾಗೂ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಇದಕ್ಕೆ ಸಂಬಂಧಿಸಿ ಹರ್ಪ್ರೀತ್ ಇನ್ಸಾನ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಇಲ್ಲಿನ ಇನ್ನೊಂದು ನ್ಯಾಯಾಲಯ ಕಳೆದ ಶನಿವಾರ ಕೈ ಬಿಟ್ಟಿತ್ತು. 1 ಲಕ್ಷ ರೂಪಾಯಿ ಶ್ಯೂರಿಟಿ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ ಎಂದು ಪ್ರತಿವಾದಿ ವಕೀಲ ಆರ್.ಎಸ್. ಚೌಹಾಣ್ ಹೇಳಿದ್ದಾರೆ.
ಹನಿಪ್ರೀತ್‌ಳನ್ನು ಅಂಬಾಲ ಜೈಲಿನಲ್ಲಿ ಇರಿಸಲಾಗಿದ್ದು, ಬುಧವಾರ ಸಂಜೆ ಬಿಡುಗಡೆಯಾಗಲಿದ್ದಾರೆ. ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂಜಯ್ ಸುಧೀರ್ ಶನಿವಾರ ಆಕೆಯ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ಕೈ ಬಿಟ್ಟ ಬಳಿಕ ಹನಿಪ್ರೀತ್ ಜಾಮೀನಿಗೆ ಮನವಿ ಸಲ್ಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.