ಅಪರಾಧ ತಗ್ಗಿಸಲು ಕಮಾಂಡ್ ಸೆಂಟರ್: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ನ.6: ಅಪರಾಧ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದಲೇ ಪೊಲೀಸ್ ಕಮಾಂಡ್ ಸೆಂಟರ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬುಧವಾರ ನಗರದ ಜನರಲ್ ಕೆ.ಜಿ.ತಿಮ್ಮಯ್ಯ ರಸ್ತೆಯಲ್ಲಿ ಕೆಎಸ್‌ಆರ್‌ಪಿ ಒಂದನೇ ಬೆಟಾಲಿಯನ್ ಆವರಣದಲ್ಲಿ ಪೊಲೀಸ್ ಕಮಾಂಡ್ ಸೆಂಟರ್ ಕಟ್ಟಡ ಕಾಮಗಾರಿಗೆ ಅಡಿಗಲ್ಲು ಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಎಸ್‌ಆರ್‌ಪಿ ಸಿಬ್ಬಂದಿಗಳು ಪ್ರಕೃತಿ ವಿಕೋಪ ಸೇರಿದಂತೆ ಇನ್ನಿತರೆ ಗಂಭೀರ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇದರ ಜೊತೆಗೆ, ಕಮಾಂಡ್ ಸೆಂಟರ್ ಕಟ್ಟಡ ನಿರ್ಮಾಣವಾದರೆ ಮತ್ತಷ್ಟು ಅಪರಾಧಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ತಗ್ಗಿದೆ ಎಂದ ಅವರು, ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ -ಧಾರವಾಡಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸೇವಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೊಲೀಸರ ಹಿತಾಸಕ್ತಿಗಾಗಿ ಸರಕಾರ ಬದ್ಧವಾಗಿದ್ದು, ರಾಜ್ಯದಲ್ಲಿ ಈಗಾಗಲೇ ಪೊಲೀಸರಿಗೆ ವಸತಿ ಸೌಲಭ್ಯ ಕಲ್ಪಿಸಲು 8,258 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ವರ್ಷದಲ್ಲಿ ಎಲ್ಲ ಪೊಲೀಸರಿಗೂ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
ಕೆಎಸ್‌ಎಚ್‌ಪಿ ಅಧ್ಯಕ್ಷ ರಾಘವೇಂದ್ರ ಔರಾದ್ಕರ್ ಮಾತನಾಡಿ, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ ನಡುವಿನ ಸಹಭಾಗಿತ್ವ ಸಂಪರ್ಕ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರಿಕೃತ ನಿಯಂತ್ರಣ ಮತ್ತು ತೀರ್ಮಾನಕ್ಕಾಗಿ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 80 ಕೋಟಿ ರೂ.ವೆಚ್ಚದಲ್ಲಿ 1,96,602 ಚರದಡಿಗಳಲ್ಲಿ 5 ಅಂತಸ್ತು ಕಟ್ಟಡದ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಶಾಸಕ ಎನ್.ಎ.ಹಾರಿಸ್, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಸೇರಿದಂತೆ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.