ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಮಿನಿಬಸ್ ಸಂಚಾರ ವ್ಯವಸ್ಥೆಗೆ ಒತ್ತಾಯ

ಚಿಕ್ಕಮಗಳೂರು, ನ.6: ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಕ್ಕೆ ಇರುವ ಪ್ರಮುಖ ಹೆದ್ದಾರಿಯಾಗಿರುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇದಿಸಿರುವುದರಿಂದ ಸಾರಿಗೆ ಬಸ್ಗಳ ಓಡಾಟ ಇಲ್ಲದೇ ಸಾರ್ವಜನಿಕರು, ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಈ ಹೆದ್ದಾರಿಯಲ್ಲಿ ಮಿನಿಬಸ್ಗಳ ಓಡಾಟಕ್ಕೆ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಸಂಚಾಲಕ ಗೌಸ್ಮೊಹಿದ್ದೀನ್ ಬುಧವಾರ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಮನವಿ ಸಲ್ಲಿಸಿದ ಬಳಿಕ ಸುದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟ್ನಲ್ಲಿ ಈ ವರ್ಷದ ವಿಪರೀತ ಮಳೆಯಿಂದ ರಸ್ತೆಯು ಕುಸಿದಿದ್ದು 3-4 ತಿಂಗಳಿನಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಲಘುವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇದಿಸಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಬಾಡಿಗೆ ವಾಹನಗಳು ಮಾತ್ರ ಈ ರಸ್ತೆಯಲ್ಲಿ ಓಡಾಡುತ್ತಿದ್ದು ಆ ವಾಹನದಲ್ಲಿ ಸಂಚರಿಸುವವರಿಗೆ ಕೊಟ್ಟಿಗೆಹಾರದಿಂದ ಉಜಿರೆಗೆ ತಲಾ 100 ರೂ. ವಸೂಲಿ ಮಾಡಲಾಗುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವವರಿಗೆ ದುಪ್ಪಟ್ಟು ಹಣ ಪಾವತಿಸಬೇಕಾಗಿರುವುದರಿಂದ ಭಾರೀ ನಷ್ಟ ಉಂಟಾಗುತ್ತಿದೆ. ಅಲ್ಲದೇ ಸಕಾಲದಲ್ಲಿ ಯಾವುದೇ ವಾಹನಗಳು ಪ್ರಯಾಣಿಕರಿಗೆ ಲಭ್ಯವಿಲ್ಲ ಎಂದು ಅವರು ತಿಳಿಸಿದರು.
ಸದ್ಯ ಸರಕಾರ ಚಾರ್ಮಾಡಿ ಘಾಟ್ ರಸ್ತೆ ಕಾಮಗಾರಿಗಾಗಿ ಸೂಚಿಸಿ 260 ಕೋಟಿ ರೂ. ಮಂಜೂರು ಮಾಡಿದೆ. ಇದಕ್ಕೆ ಅರಣ್ಯ ಇಲಾಖೆಯ ನಿರಾಪೇಕ್ಷಣ ಪತ್ರ ಬೇಕಾಗಿದ್ದು, ಅರಣ್ಯ ಇಲಾಖೆಯವರು ಇನ್ನೂ ನಿರಾಪೇಕ್ಷಣ ಪತ್ರ ನೀಡಿಲ್ಲ. ಈ ಪತ್ರ ದೊರೆತ ನಂತರ ಮುಂದಿನ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ಗಡ್ಕರಿಗೆ ಕಡತವನ್ನು ರವಾನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಹೆದ್ದಾರಿ ಮುಖ್ಯ ಕಾರ್ಯಪಾಲ ಅಭಿಯಂತರ ರಮೇಶ್ ಅವರು, ಚಾರ್ಮಾಡಿ ಘಾಟ್ ಹೆದ್ದಾರಿಗೆ ಗಂಭೀರ ಹಾನಿಯಾಗಿದ್ದು, ದುರಸ್ತಿಗೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧು.ಬಿ.ರೂಪೇಶ್ ಘಾಟ್ ಹೆದ್ದಾರಿ ದುರಸ್ತಿಗೆ 2021ರವರೆಗೂ ಕಾಲಾವಕಾಶ ಬೇಕಾಗಿದ್ದು, ಅಲ್ಲಿಯವರೆಗೆ ಸಾಮಾನ್ಯ ವಾಹನಗಳಿಗೆ ಅವಕಾಶ ಇಲ್ಲ ಎಂಬುದಾಗಿ ಹೇಳಿದ್ದಾರೆ. ಈ ಹೇಳಿಕೆಗಳಿಂದಾಗಿ ಪ್ರಯಾಣಿಕರಲ್ಲಿ ಗೊಂದಲ ಮೂಡಿದ್ದು, ಸಂಚಾರಕ್ಕೆ ಸರಕಾರಿ ವಾಹನಗಳಿಲ್ಲದಿದ್ದಲ್ಲಿ ಭಾರೀ ಸಮಸ್ಯೆ ಸೃಷ್ಟಿಯಾಗಲಿವೆ ಎಂದ ಅವರು ತಿಳಿಸಿದರು.
ಮಲೆನಾಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಡಿಘಾಟ್ ರಸ್ತೆ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಮುಖ್ಯವಾಗಿ ಮಲೆನಾಡಿನಲ್ಲಿ ಯಾವುದೇ ಅಪಘಾತ ಅಥವಾ ತುರ್ತು ಕಾರ್ಯಗಳಿಗೆ ತಕ್ಷಣವೇ ಮಂಗಳೂರು ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಇದ್ದು, ಇದು ಜನರ ಜೀವ ಉಳಿಸುವ ಹೆದ್ದಾರಿಯಾಗಿದೆ. ಇನ್ನು ಯಾವುದೆ ರೋಗಿಗಳನ್ನು ದಾಖಲೆ ಮಾಡಿದರೆ ಅವರ ಸಬಂಧಿಕರಿಗೆ ಅಲ್ಲಿ ಹೋಗಿ ಬರುವ ಅನಿವಾರ್ಯತೆ ಕೂಡ ಇರುತ್ತದೆ. ಮಲೆನಾಡು ಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೇ ಜಿಲ್ಲೆಯ ಜನರು ಧರ್ಮಸ್ಥಳ ಮತ್ತು ಉಡುಪಿ ದೇವಸ್ಥಾನಗಳಿಗೆ ಹೋಗಿ ಬರುವ ಭಕ್ತರಿಗೆ ಈ ಹೆದ್ದಾರಿ ಅನಿವಾರ್ಯವಾಗಿದೆ. ಆದ್ದರಿಂದ ಈ ಗಂಭೀರ ವಿಚಾರಗಳನ್ನು ಜಿಲ್ಲಾಡಳಿತ ಪರಿಶೀಲಿಸಿ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರಕಾರಿ ಮಿನಿಬಸ್ಗಳ ಸಂಚಾರವನ್ನು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಆರಂಭಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೋಮುಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ಹಸನಬ್ಬ, ಚಾರ್ಮಾಡಿ ಹಸನಬ್ಬ, ಸುಹೇಬಲ್ ಹಸನ್, ಅಹ್ಮದ್ ಬಾವ, ಮುಖಂಡರಾದ ಮಂಜುನಾಥ್, ಗಣೇಶ್, ಉಮರ್ಫಾರುಕ್ ಉಪಸ್ಥಿತರಿದ್ದರು.