ಮೈಕ್ರೋ ಫೈನಾನ್ಸ್ ಗಳನ್ನು ರಾಜ್ಯದಿಂದಲೇ ಓಡಿಸಿಯೇ ಸಿದ್ಧ : ಕಾರ್ಮಿಕ ಮುಖಂಡ ಎಲ್. ಮಂಜುನಾಥ್ ಎಚ್ಚರಿಕೆ
ಪುತ್ತೂರು: ಜನರನ್ನು ವಂಚಿಸುತ್ತಿರುವ ಮೈಕ್ರೋ ಫೈನಾನ್ಸ್ಗಳ ಹಣವನ್ನು ಕಟ್ಟುವುದಿಲ್ಲ. ಹಣವೆಲ್ಲಾ ಮನ್ನಾ ಆಗಬೇಕು ಎಂದು ಆಗ್ರಹದ ತೀರ್ಮಾನವನ್ನು ಜನರು ಕೈಗೊಳ್ಳಬೇಕು. ಇವರ ಎಂಜಲು ಪಡೆದು ವಸೂಲಾತಿಗೆ ಬರುವವರ ಕುರಿತೂ ಎಚ್ಚರಿಕೆ ವಹಿಸಬೇಕು. ಮುಂದಕ್ಕೆ ಇವರಿಗೆ ಹಣ ನೀಡುವ ರಾಷ್ಟ್ರಿಕೃತ ಬ್ಯಾಂಕ್ಗಳಿಗೆ ಮುತ್ತಿಗೆ ಹಾಕಲೂ ನಾವು ಹಿಂಜರಿಯುವುದಿಲ್ಲ. ರಾಜ್ಯದಲ್ಲೇ ಮೈಕ್ರೋ ಫೈನಾನ್ಸ್ ಗಳನ್ನು ಓಡಿಸಿಯೇ ತೀರುತ್ತೇವೆ ಎಂದು ಕಾರ್ಮಿಕ ಮುಖಂಡ ಎಲ್. ಮಂಜುನಾಥ ಬೆಳ್ತಂಗಡಿ ಎಚ್ಚರಿಕೆ ನೀಡಿದರು.
ಅವರು ಗುರುವಾರ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ದ.ಕ. ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ, ಪುತ್ತೂರು ತಾಲೂಕು ಹಾಗೂ ಬೆಳ್ತಂಗಡಿ ತಾಲೂಕು ಋಣಮುಕ್ತ ಹೋರಾಟ ಸಮಿತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಳ್ತಂಗಡಿ ಶಾಖೆ, ಜಿಲ್ಲಾ ದಲಿತ್ ಸೇವಾ ಸಮಿತಿ ಮತ್ತು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಸಹಯೋಗದಲ್ಲಿ ಬಡ ಸಾಲ ಸಂತ್ರಸ್ಥ ಕುಟುಂಬಗಳ, ಪ್ರಜ್ಞಾವಂತ ನಾಗರೀಕರ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮೈಕ್ರೋ ಫೈನಾನ್ಸ್ ಎಂಬುದು ಬಡವರಿಗೆ ಮಾರಿಯಾಗಿ ಪರಿಣಮಿಸಿದೆ. ಇಲ್ಲಿ ಚಲಾವಣೆಯಾಗುತ್ತಿರುವುದೇ ಕಪ್ಪು ಹಣ. ಇದಕ್ಕೆ ಪರೋಕ್ಷ ಬೆಂಬಲ ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧವೂ ನಮ್ಮ ಹೋರಾಟವಿದೆ ಎಂದು ಹೇಳಿದರು.
ದ.ಕ.ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ಸಂಚಾಲಕ ನ್ಯಾಯವಾದಿ ಬಿ.ಎಮ್ ಭಟ್ ಅವರು ಮಾತನಾಡಿ ಬಡ ವರ್ಗದ ಜನರ ರಕ್ತ ಹೀರಿ ಬೆಳೆದಿರುವಂತಹ ಬಂಡವಾಳಶಾಹಿಗಳಿAದ ಸ್ಥಾಪಿತಸಲ್ಪಟ್ಟಿರುವಂತಹ ಮೈಕ್ರೋಫೈನಾನ್ಸ್ ಗಳು ಬಡವರನ್ನು ಸುಲಿಗೆ ಮಾಡುತ್ತಿದ್ದು ಇಂತಹ ಮೈಕ್ರೋಫೈನಾನ್ಸ್ಗಳನ್ನು ಒದ್ದೋಡಿಸುವವರೆಗೆ ಹೋರಾಟ ನಡೆಸುತ್ತೆವೆ. ರಾಷ್ಟಿçÃಕೃತ ಬ್ಯಾಂಕ್ಗಳು ಬಡವರಿಗೆ ಸಾಲ ನೀಡಲು ಸತಾಯಿಸುತ್ತಿದೆ. ಈ ಕಾರಣಕ್ಕೆ ಬಡವರು ಸುಲಭವಾಗಿ ಸಾಲ ನೀಡುವಂತಹ ಮೈಕ್ರೋಫೈನಾನ್ಸ್ ಗಳಿಗೆ ಮೊರೆ ಹೋಗುವಂತಾಗಿದೆ. ಆದರೆ ಇವರು ಕೇವಲ ಆಧಾರ್ ಕಾರ್ಡಿನ ಆಧಾರದಲ್ಲಿ ಸಾಲ ನೀಡಿ ಸರಕಾರಕ್ಕೆ ಲೆಕ್ಕ ನೀಡದೆ ಕಾನೂನಿಗಿಂತ ಅಧಿಕ ಬಡ್ಡಿ ವಿಧಿಸುವ ಮೂಲಕ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ. ಸಣ್ಣ ವ್ಯವಹಾರಗಳಿಗೆ ಅನುಮತಿ ಪಡೆದುಕೊಂಡು ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿವೆ. ಬಡವರಿಗೆ ನೀಡಿರುವ ಸಾಲವನ್ನು ದಬ್ಬಾಳಿಕೆಯ ಮೂಲಕ ವಸೂಲಿಗೆ ಮುಂದಾದರೆ ಕಾನೂನು ರೀತಿಯ ಹೋರಾಟ ಸೇರಿದಂತೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕಟ್ಟುವವರನ್ನು ನಾವು ಯಾವತ್ತೂ ತಡೆಯುವುದಿಲ್ಲ. ಕಟ್ಟದವರಿಗೆ ನಾವು ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದ ಅವರು ಈ ಹಿಂದೆ ಲೇವಾದೇವಿ ವ್ಯವಹಾರ ನಿಲ್ಲಿಸುವ ಸಲುವಗಿ ಖಾಸಗಿ ಬ್ಯಾಂಕ್ಗಳನ್ನು ರಾಷ್ಟ್ರಿಕೃತ ಮಾಡಲಾಗಿತ್ತು. ಆದರೆ ಸರಕಾರಿ ಬ್ಯಾಂಕ್ಗಳ ನಿರ್ಲಕ್ಷದಿಂದಾಗಿ ಈ ರೀತಿಯ ಮೈಕ್ರೋಪೈನಾನ್ಸ್ ಮತ್ತೆ ಹುಟ್ಟಿ ಕೊಂಡು ಬಡಜನರ ರಕ್ತ ಹೀರುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ದಲಿತ್ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೆಳ್ತಂಗಡಿ ಇದರ ಸಂಚಾಲಕ ನೇಮಿರಾಜ್ ಕಿಲ್ಲೂರು, ಗುರುವಪ್ಪ ಕಲ್ಲುಗುಡ್ಡೆ, ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶೇಷಪ್ಪ ಬೆದ್ರಕಾಡು, ಉಪಾಧ್ಯಕ್ಷ ರಾಜು ಹೊಸ್ಮಠ ಮಾತನಾಡಿದರು.
ಬೆಳ್ತಂಗಡಿ ಋಣಮುಕ್ತ ಹೋರಾಟ ಸಮಿತಿಯ ಕೇಶವ ಪಿಲ್ಯ, ಕಾರ್ಮಿಕ ಮುಖಂಡ ಕೇಶವ ಗೌಡ, ಸಂತೋಷ್ ನಿನ್ನಿಕಲ್ಲು, ಇಸ್ಮಾಯಿಲ್ ಕಡಬ, ಸಿಐಟಿಯು ಬೆಳ್ತಂಗಡಿ ತಾಲೂಕು ಘಟಕದ ಲೋಕೇಶ್ ಕುದ್ಯಾಡಿ, ವಿಷ್ಣುಮೂರ್ತಿ ಭಟ್, ಗುಡ್ಡಪ್ಪ ಗೌಡ ಸೇರಿದಂತೆ ಹಲವಾರು ಮಂದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ವಿವಿಧ ಬೆಡಿಕೆಗಳ ಮನವಿಯನ್ನು ಪುತ್ತೂರು ಸಹಾಯಕ ಕಮಿಷನರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಫಲಾನುಭವಿಗಳಿಂದ ತಮ್ಮ ಸಾಲದ ವಿವರಗಳ ಅರ್ಜಿಯನ್ನು ಸಂಘಟನೆಗಳು ಪಡೆದುಕೊಂಡರು. ಬೆಳಿಗ್ಗೆ ಕಿಲ್ಲೆ ಮೈದಾನದ ಫೆಂಡಾಲ್ನಿಂದ ಮೆರವಣಿಗೆ ಆರಂಭಗೊAಡು ಪುತ್ತೂರು ಪೇಟೆಯಲ್ಲಿ ಸಂಚರಿಸಿ ಬಳಿಕ ಪುನಃ ಪೆಂಡಾಲ್ಗೆ ಬಂದು ಸೇರಿ ಪ್ರತಿಭಟನಾ ಸಭೆ ನಡೆಸಲಾಯಿತು.
ಋಣಮುಕ್ತ ಹೋರಾಟ ಸಮಿತಿಯ ಸಂಚಾಲಕ ಕೊರಗಪ್ಪ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಬೆಳ್ತಂಗಡಿ ಕ್ರಾಂತಿಗೀತೆ ಹಾಡಿದರು. ಯಶೋದಾ ಕಾರ್ಯಕ್ರಮ ನಿರೂಪಿಸಿದರು.