ಬೆಂಗಳೂರು: ರಸ್ತೆ ವಿಭಜಕಕ್ಕೆ ಕಾರು ಢಿಕ್ಕಿ; ಸಾವು
ಬೆಂಗಳೂರು, ನ.7: ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ತಾಯಿ ಮೃತಪಟ್ಟಿದ್ದು, ಮಗ ಮತ್ತು ಸೊಸೆ ಗಾಯಗೊಂಡು ಪಾರಾಗಿರುವ ಘಟನೆ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಆಡುಗೋಡಿಯ ಚಂದ್ರಪ್ಪ ನಗರದಲ್ಲಿ ಈ ಘಟನೆ ನಡೆದಿದ್ದು, ಬನ್ನೇರು ಘಟ್ಟದ ಲಕ್ಷ್ಮಿಪುರದ ಜಾನಕಮ್ಮ ಮೃತಪಟ್ಟಿದ್ದಾರೆ. ಅವರ ಪುತ್ರ ಬಾಬು(41), ಸೊಸೆ ಪೂರ್ಣಿಮಾ(35) ಗಾಯಗೊಂಡಿದ್ದು, ಇನ್ನಿಬ್ಬರು ಮೊಮ್ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಆಡುಗೋಡಿಗೆ ಇಡೀ ಕುಟುಂಬ ಸಮೇತ ಬಂದಿದ್ದ ಬಾಬು, ತಾಯಿ, ಪತ್ನಿ ಹಾಗೂ ಮಕ್ಕಳೊಂದಿಗೆ ಸ್ಕೋಡಾ ಕಾರಿನಲ್ಲಿ ಲಕ್ಷ್ಮಿಪುರಕ್ಕೆ ವಾಪಸ್ಸು ಹೋಗುತ್ತಿದ್ದರು. ಮಾರ್ಗ ಮಧ್ಯೆ ಚಂದ್ರಪ್ಪ ನಗರದ ಪಿಜಿ ರಸ್ತೆಯಲ್ಲಿ ಕಾರು ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಚಾಲಕನ ಸೀಟಿನ ಪಕ್ಕದಲ್ಲಿದ್ದ ಜಾನಕಮ್ಮ ಮೃತಪಟ್ಟರೆ, ಹಿಂದೆ ಇದ್ದ ಪತ್ನಿ ಪೂರ್ಣಿಮಾಗೆ ಕೈ ಮುರಿದ್ದು, ಬಾಬು ಕಾಲಿಗೆ ಪೆಟ್ಟಾಗಿದೆ. ಈ ಸಂಬಂಧ ಪ್ರಕರಣ ದಾಖಿಸಿಕೊಂಡಿರುವ ಆಡುಗೋಡಿ ಸಂಚಾರ ಪೊಲೀಸರು ಮುಂದಿನ ಕ್ರಮ ತನಿಖೆ ಕೈಗೊಂಡಿದ್ದಾರೆ.