ಮಂಗಳೂರು: ಲೈಂಗಿಕ ದೌರ್ಜನ್ಯ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ
ಮಂಗಳೂರು, ನ. 8: ದೇರಳಕಟ್ಟೆ ಸಮೀಪದ ಅಂಬ್ಲಮೊಗರು ಬೆಳ್ಮ ಗ್ರಾಮದಲ್ಲಿ 3 ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿ ಅಂಬ್ಲಮೊಗರು ಬೆಳ್ಮ ರೆಂಜಾಡಿ ನಿವಾಸಿ ಮುಹಮ್ಮದ್ ಅಶ್ರ್ (38) ಎಂಬಾತನಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೊಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿ ಅಶ್ರ್ 2016ರ ಜು.13ರಂದು ಮಧ್ಯಾಹ್ನ ಗುಜರಿ ಹೆಕ್ಕುವ ನೆಪದಲ್ಲಿ ಬಾಲಕ ಮತ್ತು ಆತನ ಅಜ್ಜಿ ಮಾತ್ರ ಮನೆಯಲ್ಲಿದ್ದ ವೇಳೆ ಮನೆ ಆವರಣಕ್ಕೆ ಅಕ್ರಮ ಪ್ರವೇಶ ಮಾಡಿ ಬಾಲಕನನ್ನು ಮನೆಯ ಹಿಂಭಾಗಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ಆರೋಪಿಸಲಾಗಿತ್ತು.
ಉಳ್ಳಾಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ಮತ್ತು ಸಬ್ ಇನ್‌ಸ್ಪೆಕ್ಟರ್ ಶಿವ ಪ್ರಕಾಶ್ ಅವರು ಈ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವುದಾಗಿ ಗುರುವಾರ ತೀರ್ಮಾನಕ್ಕೆ ಬಂದಿದ್ದು, ಶಿಕ್ಷೆಯ ಪ್ರಮಾಣವನ್ನು ಕಾದಿರಿಸಿದ್ದರು. ಶುಕ್ರವಾರ ಶಿಕ್ಷೆಯನ್ನು ಪ್ರಕಟಿಸಿದರು.
ಶಿಕ್ಷೆಯ ವಿವರ
ಅಕ್ರಮ ಪ್ರವೇಶ ಮತ್ತು ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪದಡಿ ಐಪಿಸಿ ಸೆ. 377 ಮತ್ತು ಪೊಕ್ಸೊ ಕಾಯ್ದೆಯ ಕಲಂ 6 ರನ್ವಯ ಆರೋಪಿಗೆ 10 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 5000 ರೂ. ದಂಡ ವಿಧಿಸಲಾಗಿದೆ.
ದಂಡದ ಮೊತ್ತದಲ್ಲಿ 3000 ರೂ.ನ್ನು ನೊಂದ ಬಾಲಕನಿಗೆ ಪರಿಹಾರವಾಗಿ ಹಾಗೂ ಉಳಿದ 2000 ರೂ.ನ್ನು ಸರಕಾರಕ್ಕೆ ಪಾವತಿಸಬೇಕೆಂದು ತೀರ್ಪಿನಲ್ಲಿ ವಿವರಿಸಲಾಗಿದೆ. ಮಾತ್ರವಲ್ಲದೆ, ಬಾಲಕನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸರಕಾರದಿಂದ ಸೂಕ್ತ ಪರಿಹಾರವನ್ನು ದೊರಕಿಸಿ ಕೊಡಬೇಕೆಂದು ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಪ್ರಕರಣದಲ್ಲಿ ಒಟ್ಟು 10 ಜನರನ್ನು ಸಾಕ್ಷಿಯನ್ನಾಗಿ ಹಾಗೂ 10 ದಾಖಲಾತಿಗಳನ್ನು ಪರಿಗಣಿಸಲಾಗಿತ್ತು.