ಸಿಎಂ ಹುದ್ದೆ ಹಂಚಿಕೆ: ಬಿಜೆಪಿ-ಶಿವಸೇನೆ ನಡುವೆ ಒಪ್ಪಂದವಾಗಿರಲಿಲ್ಲ ಎಂದ ಗಡ್ಕರಿ

ಮುಂಬೈ,ನ.8: ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಖಾತೆಗಳ ಸಮಾನ ಹಂಚಿಕೆಯ ಕುರಿತಾಗಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಯಾವುದೇ ಒಪ್ಪಂದ ಏರ್ಪಟ್ಟಿರಲಿಲ್ಲವೆಂದು ಬಿಜೆಪಿ ನಾಯಕ ನಿತಿನ್ ಗಡ್ಕರಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಗಡ್ಕರಿಯವರ ಈ ಹೇಳಿಕೆಯು ಮಿತ್ರಪಕ್ಷವಾದ ಶಿವಸೇನೆಯ ಜೊತೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳದಿರುವ ತನ್ನ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿಯದಿರುವುದನ್ನು ಸೂಚಿಸುತ್ತದೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿ ತನ್ನ ಪಕ್ಷ ಹಾಗೂ ಶಿವಸೇನೆ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ತಾನು ಮಧ್ಯಪ್ರವೇಶಿಸುವುದಿಲ್ಲವೆಂದು ಗಡ್ಕರಿ ಸುದ್ದಿಗಾರರಿಗೆ ತಿಳಿಸಿದರು.
‘‘ಆದಾಗ್ಯೂ, ನನಗೆ ತಿಳಿದಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರ ಸರಕಾರದಲ್ಲಿ ಖಾತೆಗಳ ಸಮಾನ ಹಂಚಿಕೆಯ ಬಗ್ಗೆ ಬಿಜೆಪಿ ಹಾಗೂ ಶಿವಸೇನೆ ನಡುವೆ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ” ಎಂದು ಅವರು ತಿಳಿಸಿದರು.
ಗರಿಷ್ಠ ಸಂಖ್ಯೆಯ ಚುನಾಯಿತ ಶಾಸಕರನ್ನು ಹೊಂದಿರುವ ಪಕ್ಷವು ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಬಹುದೆಂದು ಶಿವಸೇನೆಯ ಸ್ಥಾಪಕರಾದ ದಿವಂಗತ ಬಾಳಾಠಾಕ್ರೆ ಹಿಂದೊಮ್ಮೆ ಒತ್ತಿ ಹೇಳಿದ್ದರು ಎಂದು ಗಡ್ಕರಿ ತಿಳಿಸಿದರು.
ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯನ್ನು ಎರಡೂ ವರ್ಷಗಳಿಗೆ ತನಗೆ ನೀಡಬೇಕೆಂಬ ತನ್ನ ಬೇಡಿಕೆಗೆ ಸಮರ್ಥನೆಯಾಗಿ ನೂತನ ಸರಕಾರದಲ್ಲಿ ಎಲ್ಲಾ ಹುದ್ದೆಗಳನ್ನು ಉಭಯ ಪಕ್ಷಗಳ ನಡುವ ಸಮಾನವಾಗಿ ಹಂಚಲಾಗುವುದೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆನ್ನಲಾದ ವಿಡಿಯೋವನ್ನು ಶಿವಸೇನೆ ಪ್ರಸಾರ ಮಾಡುತ್ತಿದೆ.
ನಿತಿನ್ ಗಡ್ಕರಿ ಅವರ ಮುಂಬೈ ಭೇಟಿಯು ಶಿವಸೇನೆ ಹಾಗೂ ಬಿಜೆಪಿ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಅವರು ಮಧ್ಯಪ್ರವೇಶಿಸಲಿದ್ದಾರೆಂಬ ಊಹಾಪೋಹಗಳನ್ನು ಸೃಷ್ಟಿಸಿತ್ತು.
ತಾನು ಇಂದು ಸಂಜೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಮುಂಬೈಗೆ ಆಗಮಿಸಿದ್ದು, ತಾನು ಯಾವುದೇ ರಾಜಕಾರಣಿಯನ್ನು ಭೇಟಿಯಾಗುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಆದರೆ ಅಗತ್ಯವಿದ್ದಲ್ಲಿ ತಾನು ಮಧ್ಯಪ್ರವೇಶಿಸಲು ಸಿದ್ಧವಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಅಕ್ಟೋಬರ್ 21ರ ವಿಧಾನಸಭಾ ಚುನಾವಣೆಯಲ್ಲಿ 105 ಸ್ಥಾನಗಳೊಂದಿಗೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹಾಗೂ 65 ಸ್ಥಾನಗಳನ್ನು ಗೆದ್ದಿರುವ ಮಿತ್ರಪಕ್ಷವಾದ ಶಿವಸೇನೆ, ಈವರೆಗೆ ಜೊತೆಯಾಗಿ ಮೈತ್ರಿ ಸರಕಾರ ರಚಿಸಲು ಹಕ್ಕು ಮಂಡಿಸದಿರುವುದು ಮಹಾರಾಷ್ಟ್ರವು ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.