ಮಸೀದಿ ಒಡೆದಿರುವುದು ತಪ್ಪಾದರೆ ಪರಿಹಾರ ನೀಡಲು ಸೂಚಿಸಬಹುದಾಗಿತ್ತು: ದೇವೇಗೌಡ

ಮಂಗಳೂರು, ನ.9: ಅಯೋಧ್ಯೆ ವಿವಾದ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ನ್ಯಾಯಾಲಯದ ತೀರ್ಪನ್ನು ತಾನಿನ್ನೂ ವಿವರವಾಗಿ ಓದಿಲ್ಲ. ತೀರ್ಪಿನಲ್ಲಿ 1992ರಲ್ಲಿ ಬಾಬರಿ ಮಸೀದಿ ಒಡೆದು ಹಾಕಿದ್ದು, ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ ಎಂದು ಉಲ್ಲೇಖಿಸಲಾಗಿದೆ. ಮಸೀದಿ ಒಡೆದಿರುವುದು ತಪ್ಪು ಅನ್ನುವುದಾದರೆ ಅಲ್ಪ ಸಂಖ್ಯಾತರಿಗೆ ಹೊಸ ಮಸೀದಿ ನಿರ್ಮಾಣಕ್ಕೆ ಒಂದಿಷ್ಟು ಪರಿಹಾರವನ್ನು ಘೋಷಿಸಬೇಕಿತ್ತು. ಕೇಂದ್ರ ಸರಕಾರವೇ ಪರಿಹಾರ ನೀಡುವಂತೆ ನಿರ್ದೇಶನ ನೀಡಬಹುದಾಗಿತ್ತು ಎಂಬುದು ತನ್ನ ಅಭಿಪ್ರಾಯ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಮನಪಾ ಚುನಾವಣೆಯಲ್ಲಿ ಜೆಡಿಎಸ್ 14 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, ತೀರ್ಪು ಜನರ ಕೈಯಲಿದೆ ಎಂದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದೇವೇಗೌಡ, ರಾಜ್ಯದಲ್ಲಿ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಲ್ಲಿ ಅದರ ಫಲಿತಾಂಶದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಬಳಿಕ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಕರಾವಳಿಯಲ್ಲಿ ಜೆಡಿಎಸ್ ಒಂದಿಷ್ಟು ಕಳೆಗುಂದಿರುವುದು ನಿಜ. ಈ ಹಿನ್ನೆಲೆಯಲ್ಲಿ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ತಾನು ಪ್ರವಾಸ ಕೈಗೊಂಡು ಪಕ್ಷ ಬಲಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ದೇವೇಗೌಡ ನುಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ, ಮುಖಂಡರಾದ ವಸಂತ ಪೂಜಾರಿ, ಸುಮತಿ ಹೆಗಡೆ, ಹೈದರ್ ಪರ್ತಿಪ್ಪಾಡಿ, ರಾಂಗಣೇಶ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಉಪಸ್ಥಿತರಿದ್ದರು.
.gif)







