ಅಯೋಧ್ಯೆ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವುದಿಲ್ಲ: ಸುನ್ನಿ ವಕ್ಫ್ ಬೋರ್ಡ್

ಲಕ್ನೋ, ನ. 9: ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉತ್ತರಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸ್ವಾಗತಿಸಿದೆ. ತೀರ್ಪಿನ ವಿರುದ್ಧ ಯಾವುದೇ ಪುನರ್ ಪರಿಶೀಲನಾ ಹಾಗೂ ಪರಿಹಾರ ಅರ್ಜಿ ಸಲ್ಲಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
‘‘ಸುಪ್ರೀಂ ಕೋರ್ಟ್‌ನ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ ಹಾಗೂ ಸ್ವಾಗತಿಸುತ್ತೇವೆ. ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮರು ಪರಿಶೀಲಿಸುವಂತೆ ಅಥವಾ ಪರಿಹಾರ ಕೋರಿ ಅರ್ಜಿ ಸಲ್ಲಿಸದು” ಎಂದು ಉತ್ತರಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಬೋರ್ಡ್‌ನ ಅಧ್ಯಕ್ಷ ಝಫರ್ ಫಾರೂಕಿ ಅಲಿ ಹೇಳಿದ್ದಾರೆ. ಆದರೆ, ಈ ತೀರ್ಪಿಗೆ ಸಂಬಂಧಿಸಿ ಯಾವುದೇ ವ್ಯಕ್ತಿ, ವಕೀಲ ಅಥವಾ ಸಂಘಟನೆ ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಹೆಸರು ಉಲ್ಲೇಖಿಸಿ ಮರು ಪರಿಶೀಲನೆ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದರೆ, ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
1991ರ ಆರಾಧನಾ ಸ್ಥಳ ಕಾಯ್ದೆ ನಿಯಮಗಳನ್ನು ದುರ್ಬಲಗೊಳಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯ (2010)ದ ಒಬ್ಬರು ನ್ಯಾಯಾಧೀಶರ ತಪ್ಪಾದ ಅಭಿಪ್ರಾಯವನ್ನು ತಿರಸ್ಕರಿಸಿದ ಸುಪ್ರೀ ಕೋರ್ಟ್‌ಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಝಫರ್ ಪಾರೂಕಿ ಅಲಿ ಹೇಳಿದ್ದಾರೆ.





