ಕೋಮುದ್ವೇಷಕ್ಕೆ ಪ್ರಚೋದನೆ ಆರೋಪ: ‘ದಿ ಗಾರ್ಡಿಯನ್’ಗೆ ಪ್ರಸಾರ ಭಾರತಿ ಎಚ್ಚರಿಕೆ
ಫೋಟೊ: Irish Times
ಹೊಸದಿಲ್ಲಿ,ನ.9: ‘ಪೂರ್ವಾಗ್ರಹಪೀಡಿತ ವರದಿಗಾರಿಕೆ’ಯ ಮೂಲಕ ಭಾರತದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸುತ್ತಿರುವುದಾಗಿ ಆರೋಪಿಸಿ ಬ್ರಿಟಿಷ್ ದೈನಿಕ ‘ದಿ ಗಾರ್ಡಿಯನ್’ಗೆ ಪ್ರಸಾರ ಭಾರತಿಯು ಶನಿವಾರ ಎಚ್ಚರಿಕೆ ನೀಡಿದೆ.
ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ‘ಮುಸ್ಲಿಮರು ಮತ್ತು ಹಿಂದುಗಳು ಹಕ್ಕು ಮಂಡಿಸಿರುವ ಪವಿತ್ರ ಸ್ಥಳದ ಕುರಿತು ತೀರ್ಪಿಗೆ ಮುನ್ನ ಭಾರತ ಉದ್ವಿಗ್ನ ’ಶೀರ್ಷಿಕೆಯ ಲೇಖನದಲ್ಲಿ ದಿ ಗಾರ್ಡಿಯನ್,ಅಯೋಧ್ಯೆ ನಿವೇಶನವನ್ನು ದೇಶದ ‘ಅತ್ಯಂತ ವಿವಾದಾತ್ಮಕ ಧಾರ್ಮಿಕ ಸ್ಥಳ ’ಎಂದು ಬಣ್ಣಿಸಿದೆ. ಮೋದಿ ಸರಕಾರದ ಪರ ಒಲವು ಹೊಂದಿದೆ ಎಂದು ಪರಿಗಣಿಸಲಾಗಿರುವ ಸರ್ವೋಚ್ಚ ನ್ಯಾಯಾಲಯವು ಶನಿವಾರ ನೀಡಲಿರುವ ತೀರ್ಪು ಹಿಂದುಗಳ ಪರವಾಗಿ ರುವ ನಿರೀಕ್ಷೆಯಿದೆ ಎಂದು ಲೇಖನವು ಹೇಳಿತ್ತು. ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬಳಿಕ ಲೇಖನವನ್ನು ಅಪ್ಡೇಟ್ ಮಾಡಲಾಗಿದೆ.
ಕಳೆದ ಐದು ವರ್ಷಗಳಿಂದಲೂ ಅಯೋಧ್ಯೆ ಪ್ರಕರಣವು ಕೇಂದ್ರದಲ್ಲಿಯ ಆಡಳಿತ ಬಿಜೆಪಿಗೆ ಪ್ರಮುಖ ಆಸಕ್ತಿಯ ವಿಷಯವಾಗಿತ್ತು ಎಂದಿರುವ ದೈನಿಕವು,ಅದು ಹಿಂದು ರಾಷ್ಟ್ರೀಯವಾದಿ ಅಜೆಂಡಾದ ಮುಖ್ಯ ಅಂಶವಾಗಿತ್ತು ಎಂದಿದೆ.
ಸರಕಾರ ಮತ್ತು ಸಮಾಜದಿಂದ ಹೆಚ್ಚುತ್ತಿರುವ ದ್ವೇಷವನ್ನು ಎದುರಿಸುತ್ತಿರುವ ದೇಶದ 20 ಕೋಟಿ ಮುಸ್ಲಿಮರು ಗೊಂದಲದಲ್ಲಿರುವ ಸಮಯದಲ್ಲಿಯೇ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ ಎಂದಿರುವ ದಿ ಗಾರ್ಡಿಯನ್,ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಮರ ವಿರುದ್ಧ ಹಿಂಸಾತ್ಮಕ ದಾಳಿಗಳಲ್ಲಿ ಏರಿಕೆಯಾಗಿದೆ ಮತ್ತು ಕಾಶ್ಮೀರದಲ್ಲಿಯ ಇತ್ತೀಚಿನ ನಿರ್ಬಂಧಗಳನ್ನು ಬಿಜೆಪಿಯ ಮುಸ್ಲಿಂ ವಿರೋಧ ಅಜೆಂಡಾದ ಸಾಕ್ಷಾಧಾರವೆಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದೆ.