ಆರ್‌ಸಿಇಪಿಗೆ ಕಡಿವಾಣ ಹಾಕಿರುವುದು ಸ್ವಾಗತಾರ್ಹ : ಡಾ.ಎಂ.ಎನ್.ರಾಜೇಂದ್ರಕುಮಾರ್
ಮಂಗಳೂರು, ನ. 9: ದೇಶದ ಕೃಷಿ, ಹೈನುಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಭಾರೀ ಆತಂಕ ಸೃಷ್ಟಿಸಿದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುಗಾರಿಕೆ (ಆರ್‌ಸಿಇಪಿ) ಒಪ್ಪಂದವನ್ನು ಕೇಂದ್ರ ಸರಕಾರ ಕೈಬಿಟ್ಟಿರುವ ನಿರ್ಧಾರ ಸ್ವಾಗತಾರ್ಹ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಆರ್‌ಸಿಇಪಿ ಕೈಬಿಟ್ಟಿರುವುದರಿಂದ ಹೈನುಗಾರಿಕೆ ಹಾಗೂ ಪಶುಸಂಗೋಪನೆಯನ್ನು ನಂಬಿ ಜೀವನ ನಡೆಸುವ ರೈತರ ದೊಡ್ಡ ಸಮುದಾಯದ ಹಿತರಕ್ಷಣೆಯನ್ನು ಕೇಂದ್ರ ಸರಕಾರ ಕಾಪಾಡಿದೆ. ರೈತರು ದೇಶದ ಬೆನ್ನೆಲುಬು ಅವರ ಶ್ರೇಯಸ್ಸನ್ನು ಕೇಂದ್ರ ಸರಕಾರ ಬಯಸಿರುವುದು ಸ್ತುತ್ಯಾರ್ಹ. ಕೇಂದ್ರ ಸರಕಾರದ ಈ ನಿರ್ಧಾರದಿಂದ ಸಣ್ಣ ಉದ್ಯಮದಾರರೂ ಕೂಡ ಸಂತಸರಾಗಿದ್ದಾರೆ. ಮುಖ್ಯವಾಗಿ ಡೈರಿ ರೈತರಿಂದ ಸಣ್ಣ ಉದ್ಯಮಿಗಳ ಭವಿಷ್ಯದ ಆತಂಕವನ್ನು ಕೇಂದ್ರ ಸರಕಾರ ದೂರ ಮಾಡಿದೆ. ವಿದೇಶಿ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ತೆಗೆದುಹಾಕುವ ಈ ಒಪ್ಪಂದವು ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಲಿತ್ತು. ಇದರಿಂದ ಮುಖ್ಯವಾಗಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಗುಡಿ ಕೈಗಾರಿಕೆಗಳಿಗೆ ದೊಡ್ಡ ಹೊಡೆತ ಬೀಳುವುದರ ಜೊತೆಗೆ ಸ್ಥಳೀಯ ಮಾರುಕಟ್ಟೆ ವ್ಯವಸ್ಥೆ ಕೂಡ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರಕಾರಕ್ಕೆ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.





