ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಕುರಿತು ನ.11ರಂದು ಆದೇಶ: ಕೋಟ
ಉಡುಪಿ, ನ.9: ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿರುವ ಎ ಗ್ರೇಡ್ ದೇವಸ್ಥಾನಗಳಲ್ಲಿ ನಡೆಸಲು ಉದ್ದೇಶಿಸಿರುವ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿ ಎಲ್ಲ ನಿರ್ಣಯಗಳು ಆಗಿದ್ದು, ಈ ಕುರಿತು ನ.11ರಂದು ಆದೇಶ ಹೊರ ಬೀಳಲಿದೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ದಲ್ಲಿರುವ 191 ಎ ಗ್ರೇಡ್ ದೇವಸ್ಥಾನಗಳ ಪೈಕಿ ಉಡುಪಿ ಜಿಲ್ಲೆಯ ಕೊಲ್ಲೂರು, ಮಂದಾರ್ತಿ, ಅಮೃತೇಶ್ವರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು, ಸುಬ್ರಹ್ಮಣ್ಯ, ಸೋಮೇಶ್ವರ ಸಹಿತ 90ರಿಂದ 100 ದೇವಸ್ಥಾನಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಮದ್ಯದಂಗಡಿಯಲ್ಲಿನ ದೇವರ ಹೆಸರು ತೆಗೆದು ಹಾಕುವ ಬಗ್ಗೆ ನಾನು ಜನರ ಭಾವನೆಯಂತೆ ಕೇವಲ ಟಿಪ್ಪಣಿ ಮಾತ್ರ ಕೊಟ್ಟಿದ್ದೇವೆ. ಈ ಕುರಿತು ಅಬಕಾರಿ ಮತ್ತು ಕಾನೂನು ಇಲಾಖೆಯವರು ವರದಿ ಕೊಟ್ಟ ಬಳಿಕವೇ ಸರಿಯಾದ ನಿರ್ಧಾರ ತೆಗೆದು ಕೊಳ್ಳಲಾಗುವುದು. ಈ ವಿಚಾರದಲ್ಲಿ ಸರಕಾರಕ್ಕೆ ಯಾವುದೇ ತುರ್ತು ಅನಿವಾರ್ಯ ಪರಿಸ್ಥಿತಿ ಇಲ್ಲ. ಈ ಬಗ್ಗೆ ಯಾರು ಕೂಡ ಗಾಬರಿ ಪಡಬೇಕಾಗಿಲ್ಲ ಎಂದು ಅವರು ತಿಳಿಸಿದರು.
ಅನರ್ಹರ ಕ್ಷೇತ್ರಗಳಿಗೆ ಸಿಎಂ ಸಾಕಷ್ಟು ಅನುದಾನ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇವುಗಳು ಅನರ್ಹ ಕ್ಷೇತ್ರ ಇರಬಹುದು. ಇಲ್ಲಿ ಕ್ಷೇತ್ರ ಯಾರದ್ದು ಎಂದು ಹೇಳುವುದಕ್ಕಿಂತ, ಆ ಕ್ಷೇತ್ರ ನಮ್ಮ ರಾಜ್ಯದಲ್ಲಿಯೇ ಇದೆ ಎಂಬುದು ಮುಖ್ಯ. ಅಲ್ಲಿನ ಜನರಲ್ಲಿ ಶಾಸಕರಿಲ್ಲ ಎಂಬ ಭಾವನೆ ಬರ ಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಹೆಚ್ಚು ಒತ್ತು ಕೊಟ್ಟಿರಬಹುದು. ಇದು ಸರಕಾರದ ಜವಾಬ್ದಾರಿ ಎಂದರು.
ಬಸವರಾಜ ಬೊಮ್ಮಾಯಿಗಿಂತ ಈ ಜಿಲ್ಲೆಯವರನ್ನೇ ಉಸ್ತುವಾರಿ ಸಚಿವ ರಾಗಿ ಮಾಡಬೇಕೆಂಬ ಜಯಪ್ರಕಾಶ್ ಹೆಗ್ಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉಸ್ತುವಾರಿ ಸಚಿವರನ್ನು ನೇಮಕ ಮಾಡುವ ಅಧಿಕಾರ ಇರುವುದು ಸರಕಾರಕ್ಕೆ. ಹೆಗ್ಡೆಯವರ ಸಲಹೆಗಳನ್ನು ಪಕ್ಷ ಮತ್ತು ಸರಕಾರ ಗಮನಿಸಿರಬಹುದು. ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಮುಖ್ಯಮಂತ್ರಿಯಾಗಿ ರುವುದರಿಂದ ನಾವು ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿು ನೀಡುವುದಿಲ್ಲ ಎಂದು ಹೇಳಿದರು.
ಸಿದ್ಧರಾಮಯ್ಯ ಕರಾವಳಿಯಲ್ಲಿ ಮತ್ತೆ ಸೌಹಾರ್ದ ಪಾದಯಾತ್ರೆ ಮಾಡುವುದಾಗಿ ಹೇಳಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ಧರಾಮಯ್ಯ ಅವರ ಪಾದಯಾತ್ರೆಯ ಹಿಂದೆ ರಾಜಕಾರಣದ ಸೂತ್ರಗಳು ಬಿಟ್ಟರೆ ನೈಜ ಭಾವನೆಗಳು ಕಂಡುಬರುವುದಿಲ್ಲ. ಆದುದರಿಂದ ಅವರು ಪಾದಯಾತ್ರೆ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ. ಅದರ ಹಿಂದೆ ಯಾವುದೇ ಸಾತ್ವಿಕವಾದಂತಹ ರಾಜಕೀಯ ನಿರ್ಧಾರಗಳು ಇಲ್ಲ ಎಂದರು.







