ಡೆಂಗ್, ಮಲೇರಿಯ ಮನೆಮನೆ ತಲುಪಿಸಿದ್ದೇ ಕಾಂಗ್ರೆಸ್ ಸಾಧನೆ: ಶಾಸಕ ಭರತ್ ಶೆಟ್ಟಿ
ಮಂಗಳೂರು, ನ.9: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡೆಂಗ್, ಮಲೇರಿಯ ಕಾಯಿಲೆಗಳನ್ನು ಮನೆ ಮನೆಗೆ ತಲುಪಿಸಿದ್ದೆ ಕಾಂಗ್ರೆಸ್ ಪಕ್ಷದ ಸಾಧನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಟೀಕಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಡೆಂಗ್, ಮಲೇರಿಯ ಕಾಯಿಲೆಗಳಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಮಾರಕ ರೋಗಗಳಿಗೆ ಕಾಂಗ್ರೆಸ್ ನೇರ ಹೊಣೆ ಹೊರಬೇಕು ಎಂದರು.
ಮಲೇರಿಯ ನಿಯಂತ್ರಣಕ್ಕಾಗಿ ರಚಿಸಿದ್ದ 60 ಮಂದಿಯನ್ನೊಳಗೊಂಡ ಮಲೇರಿಯ ಸೆಲ್‌ನ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡಲಿಲ್ಲ. ಅವರನ್ನು ಅಂದಿನ ಆಡಳಿತ ಸರಕಾರ ನೀರಿನ ಬಿಲ್ ಕೊಡುವ ಮೀಟರ್ ರೀಡಿಂಗ್ ಕೆಲಸಕ್ಕೆ ನೇಮಿಸಿತು. ಇದರಿಂದ ನಗರದ ವಾರ್ಡ್‌ಗಳಲ್ಲಿರುವ ಮನೆ ಮನೆಗೆ ತೆರಳಿ ಡೆಂಗ್, ಮಲೇರಿಯ ಹರಡದಂತೆ ಎಚ್ಚರವಹಿಸಲು ಹಾಗೂ ರೋಗಗಳನ್ನು ನಿಯಂತ್ರಿಸುವಲ್ಲಿ ಸಲಹೆ ನೀಡಬೇಕಾದವರು ಸಿಗದೆ ಜನರು ಸಂಕಷ್ಟಕ್ಕೊಳಗಾದರು ಎಂದು ಅವರು ಆರೋಪಿಸಿದರು.





