ಮಂಗಳೂರು : ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 14ನೇ ಪದವಿ ಸಮಾರಂಭ

ಮಂಗಳೂರು: ನಗರದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‍ಜೆಇಸಿ) 14ನೇ ಪದವಿ ಸಮಾರಂಭವು ಶನಿವಾರ ನಡೆಯಿತು.
ಸಮಾರಂಭದಲ್ಲಿ 562 ಪದವಿಪೂರ್ವ ವಿದ್ಯಾರ್ಥಿಗಳು (ಬಿಇ) ಮತ್ತು 95 ಸ್ನಾತಕೋತ್ತರ ಪದವೀಧರರು (ಎಂಬಿಎ, ಎಂಸಿಎ ಮತ್ತು ಎಂಟೆಕ್) ಅಭ್ಯರ್ಥಿಗಳನ್ನು ಸೇರಿದಂತೆ 2019 ನೇ ಸಾಲಿನ ಪದವೀಧರರಿಗೆ ಸಂಸ್ಥೆಯು ಪದವಿ ಪ್ರಮಾಣಪತ್ರಗಳನ್ನು ನೀಡಿತು.
ಚೆನ್ನೈನ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಆ್ಯಂಡ್ ಬ್ಯುಸಿನೆಸ್ ಸೆಂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಹಿರಿಯ ವ್ಯವಸ್ಥಾಪಕ ಥಾಮಸ್ ಮ್ಯಾಥ್ಯೂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರಮಾಣಪತ್ರಗಳನ್ನು ಪದವೀಧರರಿಗೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಮತ್ತು ಕಾಲೇಜಿನ ಅಧ್ಯಕ್ಷರಾದ ಅತಿ ವಂ. ಡಾ. ಪೀಟರ್ ಪಾಲ್ ಸಲ್ಡಾನ್ಹಾ ವಹಿಸಿದ್ದರು. ಮುಖ್ಯ ಅತಿಥಿಯನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿನು ಕೆ.ಜಿ. ಅವರು ಪರಿಚಯಿಸಿದರು.
ಕಾಲೇಜಿನ ನಿರ್ದೇಶಕರಾದ ವಂ. ವಿಲ್ಫ್ರೆಡ್ ಪ್ರಕಾಶ್ ಡಿ'ಸೋಜಾ ಅವರು ಸ್ವಾಗತಿಸಿದರು.
ಥಾಮಸ್ ಮ್ಯಾಥ್ಯೂ, ತಮ್ಮ ಭಾಷಣದಲ್ಲಿ ಪದವೀಧರರು ತಾವು ಪಡೆಯುವ ವೃತ್ತಿಯನ್ನು ಗೌರವಿಸಬೇಕು ಮತ್ತು ವೃತ್ತಿ ಜೀವನದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಕಲಿಯಬೇಕು ಎಂದು ಕರೆ ನೀಡಿದರು. ಅವರು ಆಟೋಮೋಟಿವ್ ಇಂಡಸ್ಟ್ರಿಯಲ್ಲಿ ಉಪಯೋಗಿಸಲ್ಪಡುವ ಸ್ಮಾರ್ಟ್, ಸುರಕ್ಷಿತ, ಸುಸ್ಥಿರ, ಸುಗಮ ಮತ್ತು ಸೇವೆ ಎಂಬ 5 ಎಸ್‍ಗಳ ಬಗ್ಗೆ ಉಲ್ಲೇಖಿಸಿ ಪದವೀಧರರು ಈ 5 ಎಸ್‍ಗಳನ್ನು ತಮ್ಮ ಜೀವನದಲ್ಲಿ ಅಭ್ಯಸಿಸುವಂತೆ ತಿಳಿಸಿದರು.
ಪ್ರಾಂಶುಪಾಲರಾದ ಡಾ ರಿಯೊ ಡಿ'ಸೋಜಾ ಪದವಿ ಪ್ರಮಾಣವಚನ ನೀಡಿದರು. ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪದವೀಧರರಾದ ರೊಯ್ಡೆನ್ ರೇಗೊ ಮತ್ತು ಎಂಬಿಎ ವಿಭಾಗದ ಪದವೀಧರರಾದ ರೀನಾ ಸಿಕ್ವೇರಾ ಅವರು 2019ರ ಸಾಲಿನ ಪದವೀಧರರ ಪರವಾಗಿ ಮಾತನಾಡಿದರು.
ಶೈಕ್ಷಣಿಕ ಸಾಧಕರು ಮತ್ತು ಕ್ರೀಡಾ ಸಾಧಕರನ್ನು ಮಂಗಳೂರಿನ ಬಿಷಪ್ ಮತ್ತು ಎಸ್‍ಜೆಇಸಿ ಅಧ್ಯಕ್ಷ ಅತಿ ವಂ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಸನ್ಮಾನಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಿಷಪ್, ಪದವೀಧರರು ಕಾಲೇಜಿನ ಹೆಮ್ಮೆ ಮತ್ತು ಆಸ್ತಿ ಎಂದು ಉಲ್ಲೇಖಿಸಿದರು. ಪದವೀಧರರನ್ನು ಅಭಿನಂದಿಸುತ್ತಾ ಮಾತನಾಡಿದ ಅವರು ಕೆಲಸದ ಸ್ಥಳಗಳಲ್ಲಿ ಪರಸ್ಪರ ಅವಲಂಬಿತವಾಗಿರುವ ಕೌಶಲ್ಯಗಳನ್ನು ಕಲಿಯುವಂತೆ ಹೇಳಿದರು. ಯಂತ್ರಗಳಿಗಿಂತ ಮನುಷ್ಯರು ಮುಖ್ಯ ಎಂದು ಹೇಳುತ್ತಾ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಪದವೀಧರರಿಗೆ ಕರೆಯಿತ್ತರು.
ಕಾಲೇಜಿನ ಸಹಾಯಕ ನಿರ್ದೇಶಕರುಗಳಾದ ವಂ ರೋಹಿತ್ ಡಿ'ಕೋಸ್ಟಾ ಮತ್ತು ವಂ ಆಲ್ವಿನ್ ರಿಚರ್ಡ್ ಡಿ'ಸೋಜಾ, ಕಾಲೇಜಿನ ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ, ಕಾರ್ಯಕ್ರಮದ ಆಯೋಜಕರಾದ ರೋಹನ್ ಪಿಂಟೊ ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನ್ಸೆಂಟ್ ಕ್ರಾಸ್ತಾ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಎವಿಟಾ ಕುವೆಲ್ಲೊ ಪದವೀಧರರನ್ನು ಬರ ಮಾಡಿಕೊಂಡರು.
ಕಾರ್ಯಕ್ರಮದ ಆಯೋಜಕರಾದ ವಿನಿಶ್ ಪಿ ವಂದಿಸಿದರು.







