ಕಾಂಗ್ರೆಸ್ ಮಾಡಿಸಿದ ಕಾಮಗಾರಿಗೆ ಬಿಜೆಪಿ ಬ್ಯಾನರ್ : ಮೊಯ್ದಿನ್ ಬಾವಾ ಟೀಕೆ

ಮಂಗಳೂರು, ನ.9: ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಾಡಿಸಲಾದ ಬಹುತೇಕ ಕಾಮಗಾರಿಗಳಿಗೆ ಇದೀಗ ಬಿಜೆಪಿಗರು ತಾವೇ ಮಾಡಿಸಿದ್ದು ಎಂದು ಬ್ಯಾನರ್, ಫ್ಲೆಕ್ಸ್ ಹಾಕಿ ಮತದಾರರ ಒಲವು ಗಳಿಸಲು ಯತ್ನಿಸುತ್ತಿದ್ದಾರೆ. ಆದರೆ, ವಾಸ್ತವ ಏನು ಎಂಬುದು ಮತದಾರರಿಗೆ ತಿಳಿದಿದ್ದು, ನ.12ರಂದು ನಡೆಯುವ ಮನಪಾ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವಾ ಹೇಳಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ನಾನು ಶಾಸಕನಾಗಿದ್ದಾಗ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ವಿರೋಧ ಮಾಡಿದ್ದ ಬಿಜೆಪಿಗರು ಇದೀಗ ಅದೇ ಕಾಮಗಾರಿಗಳನ್ನು ಸ್ವತಃ ತಾವು ಮಾಡಿದ್ದು ಎನ್ನುತ್ತಿದ್ದಾರೆ. ಅಲ್ಲದೆ ತಮ್ಮ ಫೋಟೊಗಳನ್ನು ಹಾಕಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ವಾಮಂಜೂರು-ಪಿಲಿಕುಳ ದ್ವಿಪಥ ರಸ್ತೆಯ ಕಾಮಗಾರಿ ನಡೆಸುವಾಗ ಬಿಜೆಪಿಗರು ಕರಿಪತಾಕೆ ಹಿಡಿದು ಪ್ರತಿಭಟಿಸಿ ರಸ್ತೆಗೆ ಅಡ್ಡಲಾಗಿ ಮಲಗಿದ್ದರು. ಆದರೂ ನಾವಲ್ಲಿ ರಸ್ತೆ ನಿರ್ಮಿಸಿದ್ದೆವು. ಈಗ ಈ ಕಾಮಗಾರಿ ನಾವೇ ಮಾಡಿದ್ದು ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಅದಲ್ಲದೆ ಕೊಂಚಾಡಿ- ಕಾವೂರು ರಸ್ತೆ ಅಗಲೀಕರಣದ ಬಳಿಕ ಹಾಲಿ ಶಾಸಕ ಭರತ್ ಶೆಟ್ಟಿ ತಮ್ಮ ಫೋಟೊ ಹಾಕಿದ್ದಾರೆ. ನನ್ನ ಅವಧಿಯಲ್ಲಾದ ಮುಕ್ಕ- ಸಸಿಹಿತ್ಲು ಕಾಂಕ್ರಿಟೀಕರಣ ಕಾಮಗಾರಿಯನ್ನೂ ಅವರೇ ಮಾಡಿಸಿದ್ದು ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಮೊಯ್ದಿನ್ ಬಾವ ಆಕ್ಷೇಪ ವ್ಯಕ್ತಪಡಿಸಿದರು.
ರಿಟೆಂಡರ್ ಮಾಡಿಲ್ಲ: ಸುರತ್ಕಲ್-ಗಣೇಶಪುರ ಚತುಷ್ಪಥದ ರಸ್ತೆ ನಿರ್ಮಾಣಕ್ಕೆ 58 ಕೋ.ರೂ. ಅನುದಾನ ತರಿಸಿ ನನ್ನ ಅಧಿಕಾರವಧಿಯಲ್ಲಿ ಟೆಂಡರ್ ಕೂಡ ಕರೆಯಲಾಗಿತ್ತು. ಭರತ್ ಶೆಟ್ಟಿ ಶಾಸಕರಾದ ಬಳಿಕ ಆ ಟೆಂಡರ್ ರದ್ದು ಮಾಡಿದ್ದಾರೆ. ಅದಾಗಿ ಒಂದೂವರೆ ವರ್ಷವಾದರೂ ಮರುಟೆಂಡರ್ ಕರೆದಿಲ್ಲ. ಆ ರಸ್ತೆ ಇನ್ನೂ ಆಗದೆ ಬಾಕಿಯಾಗಿರುವುದಕ್ಕೆ ಶಾಸಕರೇ ಕಾರಣ. ಸುರತ್ಕಲ್ ಮಾರುಕಟ್ಟೆಗೆ 160 ಕೋ.ರೂ. ಅನುದಾನ ಮಂಜೂರುಗೊಳಿಸಿದ್ದೆ. ಅದರಲ್ಲಿ 72 ಕೋ.ರೂ. ಅನುದಾನ ತರಿಸಿ ಕಾಮಗಾರಿ ನಡೆಸುವಾಗ ಬಿಜೆಪಿಗರು ವಿರೋಧಿಸಿದ್ದರು. ಅರ್ಜಿ ಹಾಕಿದ 700 ನಿವೇಶನ ರಹಿತರಿಗೆ ಮನೆ ಕಟ್ಟಿಕೊಡಲು ನಾನು ಅನುದಾನ ಮಂಜೂರು ಮಾಡಿಸಿದ್ದೆ. ಆದರೆ ಹಾಲಿ ಶಾಸಕರಿಗೆ ಈವರಗೆ ಅದರ ಶಿಲಾನ್ಯಾಸ ಮಾಡಲೂ ಸಾಧ್ಯವಾಗಿಲ್ಲ ಎಂದು ಮೊಯ್ದಿನ್ ಬಾವಾ ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಜಯಶೀಲ ಅಡ್ಯಂತಾಯ, ನಝೀರ್ ಬಜಾಲ್, ಹಾರಿಸ್ ಬೈಕಂಪಾಡಿ ಉಪಸ್ಥಿತರಿದ್ದರು.







