400 ಸಿಕ್ಸರ್ಗಳ ಕ್ಲಬ್ನತ್ತ ರೋಹಿತ್ ಶರ್ಮಾ
ನಾಗ್ಪುರ, ನ.9: ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮಾ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಂದು ಮೈಲುಗಲ್ಲು ತಲುಪಲು ಸಜ್ಜಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ರವಿವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಲಿರುವ ರೋಹಿತ್ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ಸಿಕ್ಸರ್ಗಳ ಕ್ಲಬ್ಗೆ ಸೇರುವುದಕ್ಕೆ ಇನ್ನು ಎರಡು ಸಿಕ್ಸರ್ಗಳ ಅಗತ್ಯವಿದೆ.
ರೋಹಿತ್ ಏಕದಿನ ಕ್ರಿಕೆಟ್ನಲ್ಲಿ 232 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಟೆಸ್ಟ್ನಲ್ಲಿ 51 ಹಾಗೂ ಟ್ವೆಂಟಿ-20 ಕ್ರಿಕೆಟ್ನಲ್ಲಿ ಈ ವರೆಗೆ 115 ಸಿಕ್ಸರ್ಗಳನ್ನು ಗಳಿಸಿದ್ದಾರೆ.
ಈ ತನಕ ಕೇವಲ ಇಬ್ಬರು ಆಟಗಾರರು 400 ಸಿಕ್ಸರ್ಗಳ ಕ್ಲಬ್ ಸೇರಿದ್ದಾರೆ. ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಶಾಹಿದ್ ಅಫ್ರಿದಿ(476 ಸಿಕ್ಸರ್ಗಳು) ಹಾಗೂ ವೆಸ್ಟ್ಇಂಡೀಸ್ ಆರಂಭಿಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 534 ಸಿಕ್ಸರ್ಗಳನ್ನು ಗಳಿಸಿದ್ದಾರೆ.
ರಾಜ್ಕೋಟ್ನಲ್ಲಿ ನಡೆದ 2ನೇ ಏಕದಿನ ಪಂದ್ಯವನ್ನು ಸುಲಭವಾಗಿ ಜಯಿಸಿದ್ದ ಭಾರತ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ. ನಾಗ್ಪುರದಲ್ಲಿ ಈತನಕ ನಡೆದಿರುವ 11 ಟಿ-20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ 8ರಲ್ಲಿ ಗೆಲುವು ಸಾಧಿಸಿದೆ.