ಫುಟ್ಬಾಲ್ ಖರೀದಿಗೆ 10 ರೂ. ಸಂಗ್ರಹಿಸಲು ಸಭೆ ನಡೆಸಿ 'ಸೆಲೆಬ್ರಿಟಿ'ಗಳಾದ ಮಕ್ಕಳು!
ವಿಡಿಯೋ ವೈರಲ್

ಮಲಪ್ಪುರಂ: ಐದರಿಂದ ಹನ್ನೆರಡು ವರ್ಷದ ಆ ಮಕ್ಕಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇದೀಗ ಈ ಮಕ್ಕಳು ಕೇರಳದ ಸೆಲೆಬ್ರಿಟಿಗಳಾಗಿ ಬಿಟ್ಟಿದ್ದಾರೆ. ಹೊಸ ಫುಟ್ಬಾಲ್ ಒಂದನ್ನು ಖರೀದಿಸಲು ಪ್ರತಿಯೊಬ್ಬರಿಂದ 10 ರೂ. ಸಂಗ್ರಹಿಸಲು ಪುಟ್ಟ ಸಭೆಯೊಂದನ್ನು ನಡೆಸಿದ್ದ ಮಕ್ಕಳಿಗೆ ರಾಜ್ಯದ ವಿವಿಧೆಡೆಗಳಿಂದ ಫುಟ್ಬಾಲ್ ಗಳು, ಜೆರ್ಸಿಗಳು, ಧನಸಹಾಯ ಸಿಗುತ್ತಿದೆ.
ಈ ಮಕ್ಕಳನ್ನು 'ಸ್ಟಾರ್' ಮಾಡಿದ್ದು ಸಾಮಾಜಿಕ ಜಾಲತಾಣ. ತಮ್ಮ ಮನೆ ಸಮೀಪದಲ್ಲಿದ್ದ ಪುಟ್ಟ ಮೈದಾನವೊಂದರಲ್ಲಿ ಮಕ್ಕಳು ಸಭೆಯೊಂದನ್ನು ನಡೆಸುತ್ತಿದ್ದುದನ್ನು ಗಮನಿಸಿದ್ದ ಸುಶಾಂತ್ ನಿಲಂಬೂರ್ ಮಕ್ಕಳ ಬಳಿ ತೆರಳಿ ಸಭೆಯ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದರು.
ಮೈದಾನದ ನೆಲದಲ್ಲಿ ಕುಳಿತಿದ್ದ ಮಕ್ಕಳ ಎದುರಿಗಿದ್ದ ಅದಿನ್ ಮತ್ತು ಅರ್ಜುನ್ ಸಭೆಯನ್ನು ಆರಂಭಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಅದಿನ್ ಕಾರ್ಯಸೂಚಿ ವಿವರಿಸಿದರು. ಕಾರ್ಯದರ್ಶಿ ಈಗಾಗಲೇ ಹಣ ಸಂಗ್ರಹದ ಬಗ್ಗೆ ವಿವರಿಸಿದ್ದಾರೆ ಎಂದು ಮಾತು ಅರಂಭಿಸಿದಾಗ ಮಕ್ಕಳು ಕಿವಿ ನಿಮಿರಿಸಿ ಕೇಳುತ್ತಿದ್ದರು.
"ಪಾಕೆಟ್ ಮನಿ ಉಳಿಸೋಣ. ನಾವು ಕ್ಯಾಂಡಿ ಖರೀದಿಸಿದರೆ ನಮ್ಮ ಹಲ್ಲು ಹುಳುಕಾಗುತ್ತದೆ. ದಿನಕ್ಕೆ ಎರಡು ರೂಪಾಯಿ ಉಳಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಒಬ್ಬ 10 ರೂಪಾಯಿ ಉಳಿಸಬಹುದು. ಕ್ಲಬ್ ಗೆ ರವಿವಾರ ಅದನ್ನು ನೀಡಬಹುದು" ಎಂದು ಅರ್ಜುನ್ ಮಾತನಾಡುತ್ತಾ ವಿವರಿಸಿದ್ದ.
ಸಭೆಯಲ್ಲಿ ಅದ್ಭುತ ಗೋಲ್ ಕೀಪಿಂಗ್ ಗಾಗಿ ನಿಹಾದ್ ನನ್ನು ಸನ್ಮಾನಿಸಲಾಯಿತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟ ಉಣ್ಣಿ ಮುಕುಂದನ್ ಸೇರಿದಂತೆ ಹಲವರು ಇದಕ್ಕೆ ಸ್ಪಂದಿಸಿದ್ದಾರೆ. ಪುಟಾಣಿಗಳಿಗೆ ಫುಟ್‍ಬಾಲ್ ಹಾಗೂ ಜೆರ್ಸಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಚ್ಚುಕಟ್ಟಾಗಿ ನಡೆದ ಈ ಸಭೆಯಲ್ಲಿ ಕೆಲವು ಮಕ್ಕಳು ಮಾತನಾಡಿದ್ದರು. ಮಕ್ಕಳ ಪ್ರಬುದ್ಧತೆ ಸಾಮಾಜಿಕ ಜಾಲತಾಣದ ಬಳಕೆದಾರರ ಗಮನಸೆಳೆದಿತ್ತು. ಸುಶಾಂತ್ ನಿಲಂಬೂರ್ ರ ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಇದುವರೆಗೆ 3 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ ಈ ಮಕ್ಕಳಿಗೆ ಎಲ್ಲೆಡೆಗಳಿಂದ ನೆರವು ಲಭಿಸಿದೆ. ಇದಾದ ಎರಡು ದಿನಗಳ ಬಳಿಕ 11 ಮಂದಿ ಮಕ್ಕಳು ಕೇರಳ ಬ್ಲಾಸ್ಟರ್ಸ್ ಮತ್ತು ಒಡಿಶಾ ಎಫ್‍ಸಿ ನಡುವಿನ ಫುಟ್ ಬಾಲ್ ಪಂದ್ಯ ವೀಕ್ಷಿಸಲು ಕೇರಳ ಬ್ಲಾಸ್ಟರ್ಸ್ ಅವಕಾಶ ಮಾಡಿಕೊಟ್ಟಿದ್ದು, ಮಕ್ಕಳು ಪಂದ್ಯ ವೀಕ್ಷಿಸಿದ್ದಾರೆ. ಹಲವರು ಮಕ್ಕಳಿಗೆ ಫುಟ್ಬಾಲ್ ಗಳನ್ನು ಮತ್ತು ಜೆರ್ಸಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇಂದು ಮಕ್ಕಳ ಮೈದಾನಕ್ಕೆ ಭೇಟಿ ನೀಡಿದ್ದ ಸೈಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಮಕ್ಕಳನ್ನು ಅಭಿನಂದಿಸಿ ಫುಟ್ಬಾಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೇರಳದ ಸೆಲೆಬ್ರಿಟಿ ಮಕ್ಕಳ ವಿಡಿಯೋ ಈ ಕೆಳಗಿದೆ.







