ಉಪ ಚುನಾವಣೆ: ನಿಷೇಧಾಜ್ಞೆ ವೇಳೆ ಪ್ರಚೋದನಕಾರಿ ಘೋಷಣೆ, ಭಾಷಣಕ್ಕೆ ಕಡಿವಾಣ
ಸಂಜೀವ್ ಕುಮಾರ್
ಬೆಂಗಳೂರು, ನ.10: ನಿಷೇಧಾಜ್ಞೆ ವೇಳೆಯಲ್ಲಿ 5ಕ್ಕಿಂತ ಹೆಚ್ಚು ಜನ ಒಂದೇ ಕಡೆ ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆ, ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಸಂಜೀವ್‌ಕುಮಾರ್ ತಿಳಿಸಿದ್ದಾರೆ.
ರವಿವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶವ ಪ್ರತಿಕೃತಿಗಳ ಪ್ರದರ್ಶನ ಮಾಡುವುದು, ಪ್ರಚೋದಿಸುವಂತಹ ಘೋಷಣೆ ಕೂಗುವುದು, ಸಂಗೀತ ನುಡಿಸುವುದು, ಹಾಡುಗಾರಿಕೆ ಇನ್ನಿತರ ಚಟುವಟಿಕೆಗಳಿಗೂ ಕಡಿವಾಣ ಹಾಕಲಾಗಿದೆ. ನಾಮಪತ್ರ ಸಲ್ಲಿಕೆಯ ಕಚೇರಿ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆ ಬರುವುದು, ಪ್ರತಿಭಟನೆ ನಡೆಸುವುದು ಮತ್ತಿತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದರಿಂದ, ಜನರಿಗೆ ತೊಂದರೆಯಾಗುತ್ತದೆ. ಸಂಚಾರಕ್ಕೂ ಅಡಚಣೆ ಉಂಟಾಗಲಿದೆ. ಕೆಲವು ದುಷ್ಕರ್ಮಿಗಳು ಸರಕಾರಿ ಆಸ್ತಿಗಳಿಗೆ ಹಾನಿ ಮಾಡುವುದು ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ಮಾಡುವ ಚಟುವಟಿಕೆ ನಡೆಸುವ ಬಗ್ಗೆ ಮಾಹಿತಿ ಇದೆ. ಖುದ್ದಾಗಿ ಪರಿಶೀಲನೆ ಮಾಡಿ ಖಚಿತಪಡಿಸಿಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದರು.
ನಾಮಪತ್ರ ಸಲ್ಲಿಸುವ ಕಚೇರಿಗಳಾದ ಕೆ.ಆರ್.ಪುರ ಕ್ಷೇತ್ರದ ಹಳೆ ಮದ್ರಾಸು ರಸ್ತೆಯ ಕಂದಾಯ ಅಧಿಕಾಗಿಗಳ ಕಚೇರಿ, ಯಶವಂತಪುರ ಕ್ಷೇತ್ರದ ಕೆಂಗೇರಿ ಉಪನಗರದ ಕರ್ನಾಟಕ ಬ್ಯಾಂಕ್ ಕಟ್ಟಡ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ರಾಜಾಜಿನಗರ ಆರ್‌ಟಿಓ ಕಚೇರಿ ಸಂಕೀರ್ಣ, ಶಿವಾಜಿನಗರದ ಕ್ವೀನ್ಸ್ ರಸ್ತೆಯ ಮತದಾರರ ನೋಂದಾಣಾಧಿಕಾರಿ ಕಚೇರಿಗಳ ಸುತ್ತಮುತ್ತ ಒಂದು ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ. ನಾಮಪತ್ರ ಸಲ್ಲಿಸುವವರೊಂದಿಗೆ 5 ಮಂದಿ ಮಾತ್ರ ಹೋಗಬೇಕೆಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.