ಅಯೋಧ್ಯೆ ತೀರ್ಪಿನ ಸಂದರ್ಭ ಕರ್ತವ್ಯ ಲೋಪ: ಐವರು ಪೊಲೀಸ್ ಸಿಬ್ಬಂದಿ ಅಮಾನತು

ಸಾಂದರ್ಭಿಕ ಚಿತ್ರ
ಭೋಪಾಲ, ನ.10: ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ದಿನದಂದು ಮಧ್ಯಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಐದು ಮಂದಿ ಪೊಲೀಸ್ ಸಿಬಂದಿ ಕರ್ತವ್ಯ ಲೋಪ ತೋರಿದ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಯೋಧ್ಯೆ ಪ್ರಕರಣದ ಕುರಿತ ತೀರ್ಪನ್ನು ಶನಿವಾರ ಸುಪ್ರೀಂಕೋರ್ಟ್ ಪ್ರಕಟಿಸಿದ ಸಂದರ್ಭ ಈ ಐದು ಮಂದಿಯನ್ನು ಜಬಲ್ಪುರ ನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನಗರದ ವಿವಿಧೆಡೆ ಜಬಲ್ಪುರ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ಪೊಲೀಸ್ ಸಿಬ್ಬಂದಿಗಳು ವಾಟ್ಸ್ಯಾಪ್ನಲ್ಲಿ ಚಾಟಿಂಗ್ ನಡೆಸುತ್ತಿರುವುದು ಪತ್ತೆಯಾಗಿತ್ತು.
ಕರ್ತವ್ಯಲೋಪ ನಡೆಸಿದ ಪೊಲೀಸರನ್ನು ವಿಚಾರಣೆಗೆ ಒಳಪಡಿಸಿ ಶನಿವಾರ ರಾತ್ರಿ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಜಬಲ್ಪುರದಲ್ಲಿ 2,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು ಮತ್ತು 25 ತಾತ್ಕಾಲಿಕ ಪೊಲೀಸ್ ಹೊರಠಾಣೆಗಳನ್ನು ಸ್ಥಾಪಿಸಲಾಗಿತ್ತು.