ಎನ್‌ಆರ್‌ಸಿ ರಾಜ್ಯ ಸಂಯೋಜಕರಾಗಿ ಹಿತೇಶ್ ದೇವ್ ಶರ್ಮ ನೇಮಕ
ಹೊಸದಿಲ್ಲಿ, ನ.10: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯ ರಾಜ್ಯ ಸಂಯೋಜಕರಾಗಿ ಅಸ್ಸಾಂ ಸಿವಿಲ್ ಸರ್ವಿಸ್ ಅಧಿಕಾರಿ ಹಿತೇಶ್‌ದೇವ್ ಶರ್ಮರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ. ಇದುವರೆಗೆ ಈ ಹುದ್ದೆಯಲ್ಲಿದ್ದ ಪ್ರತೀಕ್ ಹಜೇಲಾರನ್ನು ತವರುರಾಜ್ಯ ಮಧ್ಯಪ್ರದೇಶಕ್ಕೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಅಸ್ಸಾಂನಲ್ಲಿ ಎನ್‌ಆರ್‌ಸಿಯ ಅಂತಿಮ ಆವೃತ್ತಿಯನ್ನು ಆಗಸ್ಟ್ 31ರಂದು ಪ್ರಕಟಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಹಜೇಲಾರನ್ನು ಮಧ್ಯಪ್ರದೇಶಕ್ಕೆ ವರ್ಗಾಯಿಸುವಂತೆ ಅಕ್ಟೋಬರ್ 18ರಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಎನ್‌ಆರ್‌ಸಿಯನ್ನು ಅಂತಿಮಗೊಳಿಸುವ ಬೃಹತ್ ಮತ್ತು ಸೂಕ್ಷ್ಮ ಜವಾಬ್ದಾರಿ ನಿರ್ವಹಿಸಿದ್ದ ಹಜೇಲಾರಿಗೆ ಜೀವಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ ಎಂದು ಭಾವಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅಸ್ಸಾಂ-ಮೇಘಾಲಯ ಕೇಡರ್‌ನಿಂದ ಮಧ್ಯಪ್ರದೇಶ ಕೇಡರ್‌ಗೆ ಮೂರು ವರ್ಷದ ಅವಧಿಗೆ ಅಂತರ್‌ಇಲಾಖಾ ವರ್ಗಾವಣೆ ಮಾಡುವ ಪ್ರಸ್ತಾವನೆಗೆ ಕೇಂದ್ರದ ಸಿಬಂದಿ ಮತ್ತು ತರಬೇತಿ ಇಲಾಖೆ ಒಪ್ಪಿಗೆ ಸೂಚಿಸಿತ್ತು. ಇದಕ್ಕೆ ತನ್ನಿಂದ ಯಾವುದೇ ಆಕ್ಷೇಪವಿಲ್ಲ ಎಂದು ಅಸ್ಸಾಂ ಸರಕಾರವೂ ಇಲಾಖೆಗೆ ತಿಳಿಸಿದೆ. ಹಜೇಲಾರನ್ನು ನವೆಂಬರ್ 11ರಂದು ರಾಜ್ಯ ಸಂಯೋಜಕ ಹುದ್ದೆಯಿಂದ ಬಿಡುಗಡೆಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.