ಖಾಸಗಿ ಆಸ್ಪತ್ರೆಗಳ ಶುಲ್ಕಗಳಲ್ಲಿ ಏಕರೂಪತೆ ಸಾಧ್ಯವಿಲ್ಲ: ದಿಲ್ಲಿ ಉಚ್ಚ ನ್ಯಾಯಾಲಯ
ಹೊಸದಿಲ್ಲಿ,ನ.11: ಕಾಯಿಲೆಗಳ ಸ್ವರೂಪ ಮತ್ತು ವಿಧ ಹಾಗೂ ಚಿಕಿತ್ಸೆಯ ಗುಣಮಟ್ಟವನ್ನು ಶುಲ್ಕಗಳು ಅವಂಬಿಸಿರುವುದರಿಂದ ಖಾಸಗಿ ನರ್ಸಿಂಗ್ ಹೋಮ್ಗಳು ಮತ್ತು ಆಸ್ಪತ್ರೆಗಳು ವಿಧಿಸುವ ದರಗಳಲ್ಲಿ ಏಕರೂಪತೆ ಸಾಧ್ಯವಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ.
ಖಾಸಗಿ ನಸಿರ್ಂಗ್ ಹೋಮ್ ಅಥವಾ ಆಸ್ಪತ್ರೆಯು ವಿಧಿಸುವ ಶುಲ್ಕಗಳು ಅಲ್ಲಿ ಲಭ್ಯವಿರುವ ಸೌಲಭ್ಯಗಳನ್ನೂ ಅವಲಂಬಿಸಿರುತ್ತವೆ ಎಂದು ಹೇಳಿದ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಮತ್ತು ನ್ಯಾ.ಸಿ.ಹರಿಶಂಕರ ಅವರ ಪೀಠವು,ದಿಲ್ಲಿಯಲ್ಲಿನ ಖಾಸಗಿ ನರ್ಸಿಂಗ್ ಹೋಮ್ಗಳು ಮತ್ತು ಆಸ್ಪತ್ರೆಗಳು ವಿಧಿಸುವ ಶುಲ್ಕಗಳಲ್ಲಿ ಏಕರೂಪತೆಯನ್ನು ತರಲು ಅಧಿಸೂಚನೆಯನ್ನು ಹೊರಡಿಸುವಂತೆ ದಿಲ್ಲಿ ಸರಕಾರಕ್ಕೆ ನಿರ್ದೇಶ ಕೋರಿ ಎನ್ಜಿಒ ಲೀಗಲ್ ಫೋರಮ್ ಫಾರ್ ವಿಮೆನ್ ಎಂಪವರ್ಮೆಂಟ್ ತನ್ನ ಅಧ್ಯಕ್ಷೆ ಹಾಗೂ ನ್ಯಾಯವಾದಿ ಪಾಯಲ್ ಬಹ್ಲ್ ಮೂಲಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು.
ರೋಗಿಗಳು ಪಾವತಿಸಬೇಕಾದ ಶುಲ್ಕಗಳಿಗೆ ಸಂಬಂಧಿಸಿದಂತೆ ಎಲ್ಲ ಖಾಸಗಿ ನರ್ಸಿಂಗ್ ಹೋಮ್ಗಳು ಮತ್ತು ಆಸ್ಪತ್ರೆಗಳನ್ನು ಸಮಾನವಾಗಿ ಪರಿಗಣಿಸುವಂತಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.
ಇಂತಹ ಆಸ್ಪತ್ರೆಗಳ ಅವ್ಯವಹಾರಗಳ ವಿರುದ್ಧ ದೂರು ಸಲ್ಲಿಸಲು ಸಾರ್ವಜನಿಕರಿಗೆ ನೆರವಾಗುವ ವ್ಯವಸ್ಥೆಯೊಂದು ಸಹ ಅಗತ್ಯವಿದೆ ಎಂದೂ ಅರ್ಜಿಯಲ್ಲಿ ಕೋರಲಾಗಿತ್ತು. ಇಂತಹ ಯಾವುದೇ ದೂರುಗಳನ್ನು ತನ್ನ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಗಮನಕ್ಕೆ ತಂದರೆ ಅದು ಅಗತ್ಯ ಕ್ರಮವನ್ನು ಕೈಗೊಳ್ಳುತ್ತದೆ ಎಂದು ದಿಲ್ಲಿ ಸರಕಾರವು ವಾದಿಸಿತ್ತು.