500 ಅಡಿ ಆಳದ ರಸ್ತೆಗೆ ಉರುಳಿದ ವಾಹನ: 16 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಜಮ್ಮು, ನ. 12: ಡೋಡಾ ಜಿಲ್ಲೆಯಲ್ಲಿ ಮಂಗಳವಾರ ಅಪರಾಹ್ನ ಲಿಂಕ್ ರಸ್ತೆಯಿಂದ 500 ಅಡಿ ಕೆಳಗಿರುವ ಬಟೋಟಾ-ಡೋಡಾ ಹೆದ್ದಾರಿಗೆ ಪ್ರಯಾಣಿಕರ ವಾಹನ (ಟ್ರಾಕ್ಸ್) ವೊಂದು ಉರುಳಿದ ಪರಿಣಾಮ ಮೂವರು ಮಕ್ಕಳು, ನಾಲ್ವರು ಮಹಿಳೆಯರ ಸಹಿತ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ.
16 ಮಂದಿ ಪ್ರಯಾಣಿಸುತ್ತಿದ್ದ ವಾಹನ ಅಪರಾಹ್ನ 2.45ಕ್ಕೆ ಕೆಲ್ಲಾನಿಯ ಲಿಂಕ್ ರಸ್ತೆಯಿಂದ ಬಟೋಟಾ-ಡೋಡಾ ಹೆದ್ದಾರಿಗೆ ಉರುಳಿ ಬಿತ್ತು. ಈ ದುರಂತದಲ್ಲಿ ವಾಹನದಲ್ಲಿ ಇದ್ದ ಓರ್ವ ಮಾತ್ರ ಬದುಕುಳಿದಿದ್ದಾನೆ ಎಂದು ಡೋಡಾ ಜಿಲ್ಲೆಯ ಪೊಲೀಸ್ ವರಿಷ್ಠ ಎಸ್ಎಸ್ಪಿ ಮುಮ್ತಾಝ್ ಅಹ್ಮದ್ ತಿಳಿಸಿದ್ದಾರೆ.
ವಾಹನದಲ್ಲಿ 16 ಮಂದಿ ಪ್ರಯಾಣಿಕರು ಇದ್ದರು. ವಾಹನ ಮರ್ಮಾತ್ನಿಂದ ಡೋಡಾದತ್ತ ಸಂಚರಿಸುತ್ತಿತ್ತು. ಖೆಲ್ಲಾನಿ ಸಮೀಪ ಈ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯನ್ನು ಜಮ್ಮುವಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story