ಪಡುಬಿದ್ರಿ: ಕಡಲ ತೀರದಲ್ಲಿ ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ
ಪಡುಬಿದ್ರಿ: ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ, ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಬೀಚ್ ಮ್ಯಾನೇಜ್‍ಮೆಂಟ್ ಸರ್ವಿಸಸ್, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಡಲ ತೀರದ ಸ್ವಚ್ಛತಾ ಕಾರ್ಯಕ್ಕೆ ಹೆಜಮಾಡಿಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ನವೆಂಬರ್ 18 ರವೆರೆಗೆ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಪಡುಬಿದ್ರಿ ಹಾಗೂ ಹೆಜಮಾಡಿ ಪರಿಸರದ ಶಾಲೆಗಳ ಇಕೋ ಕ್ಲಬ್‍ಗಳ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ದಿನಕ್ಕೊಂದು ಕಿಲೋಮೀಟರ್‍ನಂತೆ 7 ಕಿಲೋ ಮೀಟರ್ ವ್ಯಾಪ್ತಿಯ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ದೇಶದ 13 ರಾಜ್ಯಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ 7 ಬೀಚ್‍ಗಳಲ್ಲಿ ಸಪ್ತಾಹ ನಡೆಯಲಿದೆ.
ಬ್ಲೂಫ್ಲ್ಯಾಗ್ ಬೀಚ್‍ನ ವಿಜಯ ಶೆಟ್ಟಿ ನೇತೃತ್ವದ ತಂಡದ ನಿರ್ವಹಣೆಯಲ್ಲಿ ಹೆಜಮಾಡಿಯಲ್ಲಿ ಆರಂಭವಾದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆ, ಹೆಜಮಾಡಿ ಕೋಡಿ ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಇಕೋಕ್ಲಬ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೀಚ್ ಮ್ಯಾನೇಜ್‍ಮೆಂಟ್ ಸರ್ವಿಸಸ್‍ನ ರಮೇಶ್ಚಂದ್ರ, ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಮಾರ್ಗದರ್ಶಕ ಅಧಿಕಾರಿ ನಾಗೇಂದ್ರ ಪ್ರಸಾದ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಅಭಿಯಾನದ ಯೋಜನಾ ಸಂಯೋಜಕ ಪ್ರಭಾಕರ ಮಿತ್ಯಂತ, ಸಹಾಯಕ ಯೋಜನಾಧಿಕಾರಿ ಸುಬ್ರಹ್ಮಣ್ಯ ಭಟ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.