ಅಯೋಧ್ಯೆ ಕುರಿತ ಸುಪ್ರೀಂ ತೀರ್ಪಿಗೆ 40ಕ್ಕೂ ಹೆಚ್ಚು ಸಂಘಟನೆಗಳ ವಿರೋಧ

ಚೆನ್ನೈ, ನ.14: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೆಂಬ ಸುಪ್ರೀಂಕೋರ್ಟ್ನ ತೀರ್ಪನ್ನು ತಮಿಳುನಾಡಿನ 40ಕ್ಕೂ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ಒಕ್ಕೊರಲಿನಿಂದ ವಿರೋಧಿಸಿದೆ.
ವಿಡುಥಲೈ ಚಿರುಥೈಗಲ್ ಕಚ್ಚಿ(ವಿಸಿಕೆ), ಮೇ 17 ಅಭಿಯಾನ, ಟಿವಿಕೆ ಸೇರಿದಂತೆ 40ಕ್ಕೂ ಹೆಚ್ಚು ಸಂಘಟನೆಗಳು ಬಲಪಂಥೀಯ ವಿರೋಧಿ ಒಕ್ಕೂಟ(ಫ್ಯಾಸಿಸ್ಟ್ ವಿರೋಧಿ ಒಕ್ಕೂಟ) ಸ್ಥಾಪನೆಯನ್ನು ಘೋಷಿಸಿವೆ. ದಶಕಗಳಷ್ಟು ಹಳೆಯದಾದ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ನ ತೀರ್ಪನ್ನು ವಿರೋಧಿಸಿ ನವೆಂಬರ್ 21ರಂದು ಚೆನ್ನೈಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಒಕ್ಕೂಟವು ಸುಪ್ರೀಂಕೋರ್ಟ್ನ ತೀರ್ಪನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದೆ. ದೇಶದ ಭವಿಷ್ಯದ ರಾಜಕೀಯ ಹಿತಾಸಕ್ತಿಗೆ ಇದು ಪೂರಕವಾಗಿಲ್ಲ ಎಂದು ಪರಮಾಣು ವಿರೋಧಿ ಹೋರಾಟಗಾರ ಎಸ್ಪಿ ಉದಯಕುಮಾರ್ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನ ವಿರುದ್ಧ ಧ್ವನಿ ಎತ್ತದಿರುವ ಪ್ರಮುಖ ರಾಜಕೀಯ ಪಕ್ಷಗಳನ್ನು ಟೀಕಿಸಿರುವ ಅವರು, ಈ ತೀರ್ಪು ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯದೆ ಹಲವು ರಾಜಕೀಯ ಪಕ್ಷಗಳು ಬೂಟಾಟಿಕೆಯ ನಿಲುವನ್ನು ತಳೆದಿದೆ. ಪುರಾತನ ಕಾಲದ ಸಂರಚನೆಯನ್ನು ನೆಲಸಮಗೊಳಿಸಿದವರಿಗೆ ಸಮ್ಮತಿ ನೀಡಿದ ನ್ಯಾಯಾಲಯದ ನಿರ್ಧಾರವನ್ನು ನಾವೆಲ್ಲಾ ಖಂಡಿಸುತ್ತೇವೆ ಎಂದವರು ಹೇಳಿದ್ದಾರೆ.
ಟಿವಿಕೆ ಮುಖಂಡ ಟಿ ವೇಲ್ಮುರುಗನ್, ಶಾಸಕ ತನಿಯರಸು ಯು ಮತ್ತು ವಣ್ಣಿಯರಸು ಮತ್ತಿತರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.