ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ; ಕುಂಭ ಕಳಸ ಮೆರವಣಿಗೆ
ಉಡುಪಿ, ನ.15: ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ಹಾಗೂ ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಭಕ್ತ ಕನಕದಾಸರ 532ನೇ ಜಯಂತಿ ಮಹೋತ್ಸವದ ಪ್ರಯುಕ್ತ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಯನ್ನು ಶುಕ್ರವಾ ಉಡುಪಿಯಲ್ಲಿ ಹಮ್ಮಿಕೊಳ್ಳಲಾಯಿತು.
ರಥಯಾತ್ರೆಗೆ ಉಡುಪಿ ಜೋಡುಕಟ್ಟೆಯಲ್ಲಿ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಕೃಷ್ಣಮಠದ ರಥಬೀದಿಯಲ್ಲಿ ಸಮಾಪನ ಗೊಂಡಿತು. ಇದರಲ್ಲಿ 751 ಮಹಿಳೆಯರು ಕುಂಭ ಕಳಸದೊಂದಿಗೆ ಸಾಗಿ ಬಂದರು. ಅದೇ ರೀತಿ ಚಂಡೆ, ಕೊಂಬು, ಡೊಳ್ಳು ಕುಣಿತ ಗಮನ ಸೆಳೆಯಿತು.
ಮಠದ ಕನಕ ಗೋಪುರದ ಎದುರಿನ ಕನಕದಾಸರ ಮೂರ್ತಿಗೆ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ ದರು. ಬಳಿಕ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಕನಕದಾಸರು ದೇವರು ಕೊಟ್ಟ ದೀಪ. ಕನಕದಾಸರು ನೀಡಿದ ಸಾಹಿತ್ಯ, ಜೀವನ, ಪರಂಪರೆ ಎಲ್ಲವೂ ಅಜರಾಮರ. ಕನಕಭಕ್ತಿ ಅದ್ಭುತವಾದ ಭಕ್ತಿ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಳೆದ 535 ವರ್ಷಗಳಿಂದ ಕನಕನಿಗೆ ಪೂಜೆ ನಡೆಯುತ್ತಿದೆ. ಗಂಜಿ ಮತ್ತು ರೊಟ್ಟಿಯನ್ನು ಗೆರಟೆಯಲ್ಲಿ ನೀಡುವ ಪದ್ಧತಿಯನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಕನಕದಾಸರ ಜಯಂತಿ ಇಡೀ ಜಗತ್ತಿಗೆ ದೀಪೋತ್ಸವ. ಕನಕದಾಸ ದೇವರು ಕೊಟ್ಟಿರುವ ಸಂಪತ್ತು ಎಂದು ಅವರು ತಿಳಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಥಬೀದಿಯಲ್ಲಿರುವ ಕನಕನ ಮೂರ್ತಿ ಹಾಗೂ ಗುಡಿಯನ್ನು ನಿರ್ಮಿಸಿದ್ದು ಮಲ್ಪೆಮಧ್ವರಾಜ್. ಈ ಗುಡಿಯನ್ನು ಬಹಳ ವೈಭವದಿಂದ ಜೀರ್ಣೋದ್ಧಾರಗೊಳಿಸಬೇಕು. ಈ ನಿಟ್ಟಿನಲ್ಲಿ ಹಾಲುಮತ ಸಮಾಜದವರು ಭಿನ್ನಾಭಿಪ್ರಾಯ ಮರೆತು ಒಂದಾಗಿ ಈ ಗುಡಿ ನಿರ್ಮಾಣ ಕಾರ್ು ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಸಾಹಿತಿ ಗಳಾದ ಪ್ರೊ.ಕೃಷ್ಣಮೂರ್ತಿ, ಪ್ರೊ.ಚೊಕ್ಕನಳ್ಳಿ ಮಹೇಶ್ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬೆಂಗಳೂರಿನ ಶ್ರೀಉಮಾಶಂಕರ್ ಸ್ವಾಮೀಜಿ, ಸಮಿತಿಯ ರಾಜ್ಯಾಧ್ಯಕ್ಷ ಓಂ ಕೃಷ್ಣಮೂರ್ತಿ, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಸಂಘದ ಮಾಜಿ ಅಧ್ಯಕ್ಷ ಹನುಮಂತ ಎಸ್.ಡೊಳ್ಳಿನ ಉಪಸ್ಥಿತರಿದ್ದರು.
ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಸ್ವಾಗತಿಸಿದರು. ಜಿಲ್ಲಾ ಕನಕ ದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಐಹೊಳೆ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾಂಜೆ ಕಾರ್ಯಕ್ರಮ ನಿರೂಪಿಸಿದರು.