ಸರಕಾರದ ಅತಿಯಾದ ತೆರಿಗೆ ಸಂಗ್ರಹ ಗುರಿಯಿಂದ ಬೇಸತ್ತ ತೆರಿಗೆ ಅಧಿಕಾರಿಗಳು, ಕೆಲವರ ರಾಜೀನಾಮೆ: ವರದಿ

ಮುಂಬೈ/ಕೋಲ್ಕತಾ, ನ.15: ಅತಿಯಾದ ತೆರಿಗೆ ಸಂಗ್ರಹದ ಸರಕಾರದ ಗುರಿ ತೆರಿಗೆ ಅಧಿಕಾರಿಗಳನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ತೀವ್ರ ಆರ್ಥಿಕ ಹಿಂಜರಿತದ ನಡುವೆಯೇ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಬಯಸಿರುವ ನರೇಂದ್ರ ಮೋದಿ ಸರಕಾರವು ಈ ವರ್ಷ ಶೇ.17ರಷ್ಟು ಹೆಚ್ಚಿನ ನೇರ ತೆರಿಗೆಗಳನ್ನು ಸಂಗ್ರಹಿಸುವಂತೆ ತನ್ನ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ನೇರ ತೆರಿಗೆಗಳ ಭಾಗವಾಗಿರುವ ಕಾರ್ಪೊರೇಟ್ ತೆರಿಗೆಗಳಲ್ಲಿ ಭಾರೀ ಕಡಿತಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ,ಜೊತೆಗೆ ತೆರಿಗೆ ಸಂಗ್ರಹ ಅಭಿಯಾನದಲ್ಲಿ ಉದ್ಯಮಗಳಿಗೆ ಕಿರುಕುಳ ನೀಡದಂತೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದಾಗ್ಯೂ ತೆರಿಗೆ ಸಂಗ್ರಹ ಗುರಿಯನ್ನು ಇಳಿಸಲಾಗಿಲ್ಲ ಎಂದು Reuters ವರದಿ ತಿಳಿಸಿದೆ.
ತಮ್ಮ ಸ್ಥಿತಿ ‘ಅತ್ತ ದರಿ ಇತ್ತ ಪುಲಿ ’ಎಂಬಂತಾಗಿದೆ ಎಂದು Reuters ಸುದ್ದಿ ಸಂಸ್ಥೆಯು ಸಂದರ್ಶನ ನಡೆಸಿದ ಡಝನ್‌ಗೂ ಅಧಿಕ ಅಧಿಕಾರಿಗಳು ಸಂಕಟವನ್ನು ತೋಡಿಕೊಂಡಿದ್ದಾರೆ.
ತಮ್ಮ ಮೌಲ್ಯಮಾಪನ ಮತ್ತು ವರ್ಗಾವಣೆಗಳ ಮೇಲೆ ಪ್ರಭಾವ ಬೀರುವ ಅವಾಸ್ತವಿಕ ತೆರಿಗೆ ಸಂಗ್ರಹದ ಗುರಿಯನ್ನು ಸಾಧಿಸಬೇಕಾದ ಒತ್ತಡ ಮತ್ತು ತೆರಿಗೆ ವಂಚನೆಯ ವಿರುದ್ಧ ದಾಳಿ ನಡೆಸಿದರೆ ಅತ್ಯುತ್ಸಾಹವನ್ನು ಪ್ರದರ್ಶಿಸಿದ ಆರೋಪಕ್ಕೆ ಗುರಿಯಾಗುವ ಭೀತಿಯ ನಡುವೆ ತಾವು ಅಪ್ಪಚ್ಚಿಯಾಗಿದ್ದೇವೆ ಎಂದು ಈ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಅಧಿಕ ತೆರಿಗೆ ಸಂಗ್ರಹಕ್ಕಾಗಿ ಅಧಿಕಾರಿಗಳ ಮೇಲೆ ಮೋದಿಯವರ ಒತ್ತಡವು ಅವರ ಸರಕಾರದ ಆರ್ಥಿಕ ನೀತಿಗಳ ಸುತ್ತಲಿನ ಗೊಂದಲ ಮತ್ತು ಬೆಳವಣಿಗೆಯ ಮಂದಗತಿಗೆ ಕಾರಣವಾಗಿರುವ ತಪ್ಪುಗಳ ಸಂಕೇತವಾಗಿದೆ ಎನ್ನುವುದು ಪ್ರಧಾನಿಯವರ ಟೀಕಾಕಾರರ ಅಭಿಪ್ರಾಯವಾಗಿದೆ ಎಂದು Reuters ವರದಿ ಮಾಡಿದೆ.
ಈ ವರ್ಷ ಈಗಾಗಲೇ 22 ಉನ್ನತ ದರ್ಜೆಯ ತೆರಿಗೆ ಅಧಿಕಾರಿಗಳು ಸ್ವಯಂ ನಿವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು, 2018ರಲ್ಲಿ ಸುಮಾರು 34 ಅಧಿಕಾರಿಗಳು ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಆದಾಯ ತೆರಿಗೆ ಪತ್ರಾಂಕಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಭಾಸ್ಕರ ಭಟ್ಟಾಚಾರ್ಯ ಅವರು ಸುದ್ದಿಸಂಸ್ಥೆಗೆ ಒದಗಿಸಿರುವ ಮಾಹಿತಿಗಳು ಬೆಟ್ಟುಮಾಡಿವೆ ಎಂದು ವರದಿ ತಿಳಿಸಿದೆ.
25-30 ವರ್ಷಗಳ ಅನುಭವವಿರುವ ಅಧಿಕಾರಿಗಳಿಗೂ ಈ ಒತ್ತಡವನ್ನು ಇನ್ನಷ್ಟು ಹೆಚ್ಚು ಕಾಲ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲಾಖೆಯಲ್ಲಿ ಸ್ವಯಂ ನಿವೃತ್ತಿ ಅಥವಾ ಸುವರ್ಣ ಹಸ್ತಲಾಘವದ ಯಾವುದೇ ಯೋಜನೆ ಇಲ್ಲವಾದರೂ ಸ್ವಯಂ ನಿವೃತ್ತಿಗಾಗಿ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ ಎಂದು ಭಟ್ಟಾಚಾರ್ಯ ಅವರನ್ನು ಉಲ್ಲೇಖಿಸಿ Reuters ಸುದ್ದಿಸಂಸ್ಥೆಯು ಹೇಳಿದೆ.