ಹೋಟೆಲ್ ಪಾರ್ಕಿಂಗ್ ನಿಂದ ವಾಹನ ಕಳವಾದರೆ ಹೋಟೆಲ್ ಹೊಣೆ: ಸುಪ್ರೀಂ ಮಹತ್ವದ ತೀರ್ಪು

ಹೊಸದಿಲ್ಲಿ, ನ.17: ವಾಹನಗಳ ಮಾಲಕರು ತಮ್ಮ ಸ್ವಂತ 'ರಿಸ್ಕ್'ನಡಿ ವಾಹನವನ್ನು ನಿಲುಗಡೆ ಮಾಡಬಹುದು ಎಂದು ಹೋಟೆಲ್ ಗಳು ಇನ್ನು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ವಾಹನ ನಿಲುಗಡೆಗೆ ಹೋಟೆಲ್ ನ ಟೋಕನ್ ಪಡೆದ ಬಳಿಕ ವಾಹನಕ್ಕೆ ಯಾವುದೇ ಹಾನಿಯಾದರೆ ಅಥವಾ ವಾಹನ ಕಳ್ಳತನವಾದರೆ ಅತಿಥಿಗಳಿಗೆ ಪರಿಹಾರ ನಿರಾಕರಿಸಲಾಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ವಾಹನದ ಕೀಲಿಯನ್ನು ವ್ಯಾಲೆಟ್ ಗೆ ಹಸ್ತಾಂತರಿಸಿದ ಬಳಿಕ ಅದು ಆಯಾ ಹೋಟೆಲ್ ನ ಹೊಣೆಗಾರಿಕೆ ಎಂದು ತೀರ್ಪು ನೀಡಿದೆ. 2008ರಲ್ಲಿ ದೆಹಲಿಯ ತಾಜ್ ಮಹಲ್ ಹೋಟೆಲ್ ಆವರಣದಿಂದ ಹೋಟೆಲ್ ಗ್ರಾಹಕರೊಬ್ಬರ ಮಾರುತಿ ಝೆನ್ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಕಳೆದುಕೊಂಡ ವ್ಯಕ್ತಿಗೆ 2.8 ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕು ಎಂದು ಆದೇಶಿಸಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ವಿಲೇವಾರಿ ಆಯೋಗ ನೀಡಿದ ತೀರ್ಪನ್ನು ನ್ಯಾಯಮೂರ್ತಿಗಳಾದ ಎಂ.ಎಂ.ಶಾಂತನಗೌಡರ್ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಎತ್ತಿಹಿಡಿದಿದೆ. ವಾಹನ ಕಳ್ಳತನಕ್ಕೆ ಹೋಟೆಲ್ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಅಭಿಪ್ರಾಯಪಟ್ಟಿದೆ.
"ವಾಹನ ನಿಲುಗಡೆಯ ಜವಾಬ್ದಾರಿಯನ್ನು ಹೋಟೆಲ್ ವಹಿಸಿಕೊಂಡ ಮೇಲೆ, ಪಾರ್ಕಿಂಗ್ ಚೀಟಿ ತೋರಿಸಿದ ಬಳಿಕ ಅದನ್ನು ಮಾಲಕರಿಗೆ ಸುರಕ್ಷಿತವಾಗಿ ಹಿಂದಿರುಗಿಸುವುದು ಹೋಟೆಲ್‍ನ ಜವಾಬ್ದಾರಿ. ಮಾಲಕ ವಾಹನವನ್ನು ಹಸ್ತಾಂತರಿಸುವಾಗ ಯಾವ ಸ್ಥಿತಿಯಲ್ಲಿತ್ತೋ ಅದೇ ಸ್ಥಿತಿಯಲ್ಲಿ ಮರಳಿಸಬೇಕಾಗುತ್ತದೆ. ಕೊಠಡಿ, ಆಹಾರ, ಪ್ರವೇಶ ಶುಲ್ಕ, ಲಾಂಜ್ ಮತ್ತು ಕ್ಲಬ್ ಗಳಿಗೆ ದುಬಾರಿ ಶುಲ್ಕ ವಿಧಿಸಿದ ಬಳಿಕ ವಾಹನ ನಿಲುಗಡೆಯನ್ನು ಉಚಿತವಾಗಿ ನೀಡಿದರೂ, ವಾಹನಗಳ ಜವಾಬ್ದಾರಿ ಹೋಟೆಲ್‍ನದ್ದೇ ಆಗಿರುತ್ತದೆ" ಎಂದು ಸ್ಪಷ್ಟಪಡಿಸಿದೆ.







