ಕುಂದಾಪುರ: ಸುಸಜ್ಜಿತ ಮರ್ಸಿಡಿಸ್ ಬೆನ್ಝ್ ಮೊಬೈಲ್ ಸರ್ವಿಸ್ ಟ್ರಕ್ ನಿಂದ ಗ್ರಾಹಕರ ಕಾರುಗಳ ಸರ್ವಿಸ್
![ಕುಂದಾಪುರ: ಸುಸಜ್ಜಿತ ಮರ್ಸಿಡಿಸ್ ಬೆನ್ಝ್ ಮೊಬೈಲ್ ಸರ್ವಿಸ್ ಟ್ರಕ್ ನಿಂದ ಗ್ರಾಹಕರ ಕಾರುಗಳ ಸರ್ವಿಸ್ ಕುಂದಾಪುರ: ಸುಸಜ್ಜಿತ ಮರ್ಸಿಡಿಸ್ ಬೆನ್ಝ್ ಮೊಬೈಲ್ ಸರ್ವಿಸ್ ಟ್ರಕ್ ನಿಂದ ಗ್ರಾಹಕರ ಕಾರುಗಳ ಸರ್ವಿಸ್](https://www.varthabharati.in/sites/default/files/images/articles/2019/11/19/219969-1574165511.jpg)
ಕುಂದಾಪುರ, ನ.19: ಮರ್ಸಿಡಿಸ್ ಬೆನ್ಝ್ ಗ್ರಾಹಕರ ಅನುಕೂಲಕ್ಕಾಗಿ ಮಂಗಳೂರಿನ ಬೆನ್ಝ್ ಕಾರು ಡೀಲರ್ ಸುಂದರಂ ಮೋಟರ್ಸ್ ಮುತುವರ್ಜಿ ಯಲ್ಲಿ ಕುಂದಾಪುರಕ್ಕೆ ಆಗಮಿಸಿರುವ ಸುಸಜ್ಜಿತ ಸಂಚಾರಿ (ಮೊಬೈಲ್) ಸರ್ವಿಸ್ ಟ್ರಕ್, ಗ್ರಾಹಕರ ಕಾರುಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ.
ಕುಂದಾಪುರ ಕೋಟೇಶ್ವರದ ಯುವ ಮೆರಿಡಿಯನ್ ಬೇ ರೆಸಾರ್ಟ್ ಆ್ಯಂಡ್ ಸ್ಪಾದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಮೊಬೈಲ್ ಸರ್ವಿಸ್ ಟ್ರಕ್ ಸೇವೆಯನ್ನು ಗ್ರಾಹಕರಾದ ಚಿರಂಜೀತ್ ಅಜಿಲ ನ.19ರಂದು ಉದ್ಘಾಟಿಸಿ ಶುಭ ಹಾರೈಸಿದರು. ಈ ಸೇವೆ ನ. 20ರಂದು ಕೂಡ ಇದೆ.
ಬೆನ್ಝ್ ಗ್ರಾಹಕರಾದ ಲಯನ್ಸ್ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ ಮಾತನಾಡಿ, ಗ್ರಾಹಕರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ಇಂದಿನ ಬ್ಯುಸಿ ಸಮಯ ದಲ್ಲಿ ತಮ್ಮ ಕಾರಿನ ಸರ್ವಿಸ್ಗೆ ದೂರದ ಮಂಗಳೂರಿಗೆ ಹೋಗಲು ಸಾಧ್ಯ ಇಲ್ಲದವರಿಗೆ ಈ ಮೊಬೈಲ್ ಸರ್ವಿಸ್ ಬಹಳಷ್ಟು ಅನುಕೂಲಕರವಾಗಿದೆ. ಉಡುಪಿ ಜಿಲ್ಲೆಯವರಿಗೆ ಹತ್ತಿರದಲ್ಲೇ ತಮ್ಮ ಕಾರುಗಳನ್ನು ಸರ್ವಿಸ್ ಮಾಡ ಬಹುದಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಸುಂದರಂ ಮೋಟರ್ಸ್ ಇನ್ನಷ್ಟು ಸೇವೆಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಯುವ ಮೆರಿಡಿಯನ್ ಬೇ ರೆಸಾರ್ಟ್ ಆ್ಯಂಡ್ ಸ್ಪಾ ಇದರ ಮಾಲಕರಾದ ವಿನಯ ಕುಮಾರ್ ಶೆಟ್ಟಿ ಹಾಗೂ ಸುಂದರಂ ಮೋಟರ್ಸ್ನ ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ಬೆನ್ಝ್ ಕಂಪೆನಿಯ ನೂತನ ಎಎಂಜಿ ಜಿಎಲ್ಸಿ 43, ನ್ಯೂ ಸಿ ಕ್ಲಾಸ್, ನ್ಯೂ ಇ ಕ್ಲಾಸ್ ಕಾರುಗಳ ಉಚಿತ ಟೆಸ್ಟ್ ಡ್ರೈವ್ಗೆ ಅವಕಾಶ ಮಾಡಿಕೊಡಲಾಯಿತು.
ಮೊಬೈಲ್ ಟ್ರಕ್ನ ವಿಶಿಷ್ಟತೆಗಳು
ಕೇರಳದಿಂದ ಆಗಮಿಸಿರುವ ಈ ಟ್ರಕ್ 15 ದಿನಗಳ ಕಾಲ ಕರ್ನಾಟಕದಲ್ಲಿ ತಿರುಗಾಟ ನಡೆಸಿ ಗ್ರಾಹಕರಿಗೆ ಸೇವೆ ಯನ್ನು ಒದಗಿಸಲಿದೆ. ಇಂದಿನಿಂದ ಕುಂದಾಪುರದಲ್ಲಿ ಎರಡು ದಿನಗಳ ಸೇವೆಯ ಬಳಿಕ ಈ ಟ್ರಕ್, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಬೆಳಗಾವಿಗೆ ತೆರಳಲಿ ಅಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡಲಿದೆ.
ಸರ್ವ ಸುಸಜ್ಜಿತವಾದ ಈ ಮೊಬೈಲ್ ಟ್ರಕ್ನಲ್ಲಿ ಕಾರು ಸರ್ವಿಸ್ಗೆ ಸಂಬಂಧಿ ಸಿದ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಮೂರು ಮಂದಿ ನುರಿತ ಮೆಕ್ಯಾನಿಕ್ಗಳು ಇದ್ದು, ಉತ್ತಮ ಸೇವೆಯನ್ನು ಒದಗಿಸುತ್ತಿದ್ದಾರೆ. ಈ ಟ್ರಕ್ನಲ್ಲಿ ಬೆನ್ಝ್ ಕಾರಿನ ಎಲ್ಲ ಬಿಡಿಭಾಗಗಳು ಲಭ್ಯ ಇದ್ದು, ಕಾರಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಪತ್ತೆ ಹಚ್ಚಿ ಸರಿಪಡಿಸುವ ವ್ಯವಸ್ಥೆ ಇದರಲ್ಲಿ ಇದೆ.
ಅದೇ ರೀತಿ ಟ್ರಕ್ನಲ್ಲಿ ಪ್ರತ್ಯೇಕ ಹವಾನಿಯಂತ್ರಿತ ಕೋಣೆ ಇದ್ದು, ಇಲ್ಲಿ ಗ್ರಾಹಕರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಗ್ರಾಹಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಎಲ್ಲ ವ್ಯವಸ್ಥೆ ಈ ಕೋಣೆಯಲ್ಲಿ ಇದೆ. ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಹಲವು ಗ್ರಾಹಕರು ತಮ್ಮ ಕಾರಿಗಳೊಂದಿಗೆ ಆಗಮಿಸಿ ಸರ್ವಿಸ್ ಮಾಡಿಸಿದ್ದಾರೆ. ಅಲ್ಲದೆ ಹೊಸ ಕಾರುಗಳ ಟೆಸ್ಟ್ ಡ್ರೈವ್ ಕೂಡ ನಡೆಸಿದ್ದಾರೆ.