50 ವರ್ಷಗಳಲ್ಲಿ ಭಾರತದ ಕರಾವಳಿಯಲ್ಲಿ ಸಮುದ್ರ ಮಟ್ಟ 8.5 ಸೆಂ.ಮೀ. ಏರಿಕೆ: ಸುಪ್ರಿಯೊ

ಹೊಸದಿಲ್ಲಿ, ನ.19: ಕಳೆದ 50 ವರ್ಷಗಳಲ್ಲಿ ಭಾರತದ ಕರಾವಳಿಯಲ್ಲಿ ಸಮುದ್ರ ಮಟ್ಟ 8.5 ಸೆಂ.ಮೀ.ಏರಿಕೆಯಾಗಿದೆ ಎಂದು ಕೇಂದ್ರ ಸಹಾಯಕ ಪರಿಸರ ಸಚಿವ ಬಾಬುಲ್ ಸುಪ್ರಿಯೊ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಲವಾರು ನಗರಗಳು ಮುಳುಗಡೆಯಾಗಲಿವೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು,ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟದಲ್ಲಿ ಏರಿಕೆ ದರವನ್ನು ನಿಶ್ಚಿತವಾಗಿ ಹೇಳಲಾಗುವುದಿಲ್ಲ,ಭಾರತದ ಕರಾವಳಿಯಲ್ಲಿ ಸಮುದ್ರ ಮಟ್ಟ ವರ್ಷಕ್ಕೆ ಸರಾಸರಿ 1.70 ಮಿ.ಮೀ.ನಷ್ಟು ಹೆಚ್ಚುತ್ತಿದೆ ಎಂದು ಪರಿಗಣಿಸಲಾಗಿದೆ. ಅಂದರೆ ಕಳೆದ 50 ವರ್ಷಗಳಲ್ಲಿ 8.5 ಸೆಂ.ಮೀ.ಏರಿಕೆಯಾಗಿದೆ. ಕಳೆದೊಂದು ದಶಕದಲ್ಲಿ ಹಿಂದು ಮಹಾಸಾಗರದ ಮಟ್ಟ ವಾರ್ಷಿಕ 6.1 ಮಿ.ಮೀ.ದರದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದರು.
ಹೆಚ್ಚುತ್ತಿರುವ ಸಮುದ್ರ ಮಟ್ಟವು ಸುನಾಮಿ,ತೂಫಾನು,ತೀರದಲ್ಲಿ ಪ್ರವಾಹ ಮತ್ತು ಕಡಲ್ಕೊರೆತ ಸಂದರ್ಭಗಳಲ್ಲಿ ಕರಾವಳಿಯಲ್ಲಿನ ತಗ್ಗು ಪ್ರದೇಶಗಳನ್ನು ಮಳುಗಿಸಬಲ್ಲದು. ಆದರೆ ಹೆಚ್ಚುತ್ತಿರುವ ಸಮುದ್ರ ಮಟ್ಟದಿಂದಾಗಿ ಮುಳುಗಡೆಯಾಗಬಹುದಾದ ಪ್ರದೇಶಗಳನ್ನು ಸರಾಸರಿ ಸಮುದ್ರ ಮಟ್ಟದಿಂದ ಅವುಗಳ ಎತ್ತರವನ್ನು ಆಧರಿಸಿ ನಿರ್ಧರಿಸಬೇಕಾಗುತ್ತದೆ. ಈ ತಾಣಗಳಿಗಾಗಿ ಭೂ ಕುಸಿತ ಅಥವಾ ಭೂ ಹೊರಹೊಮ್ಮುವಿಕೆ ಕುರಿತು ದೀರ್ಘಕಾಲಿಕ ದತ್ತಾಂಶಗಳು ಲಭ್ಯವಿಲ್ಲದ್ದರಿಂದ ಹವಾಮಾನ ಬದಲಾವಣೆಯಿಂದ ಸಮುದ್ರ ಮಟ್ಟ ಹೆಚ್ಚಳ ದರವನ್ನು ನಿಶ್ಚಿತವಾಗಿ ಹೇಳಲಾಗದು ಎಂದ ಅವರು,ಉದಾಹರಣೆಗೆ ಡೈಮಂಡ್ ಹಾರ್ಬರ್ನಲ್ಲಿ ಸಮುದ್ರ ಮಟ್ಟ ಏರಿಕೆ ದರ ಹೆಚ್ಚಾಗಿರುವುದಕ್ಕೆ ಅಲ್ಲಿ ಸಂಭವಿಸುವ ದೊಡ್ಡ ಭೂಕುಸಿತಗಳು ಕಾರಣವಾಗಿವೆ. ಇದು ಕಾಂಡ್ಲಾ,ಹಾಲ್ದಿಯಾ ಮತ್ತು ಪೋರ್ಟ್ ಬ್ಲೇರ್ಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.