ಅಪ್ರಾಪ್ತ ದಲಿತ ವಿದ್ಯಾರ್ಥಿನಿಯ ಅತ್ಯಾಚಾರ: ಇಬ್ಬರ ಬಂಧನ
ಅಶೋಕ್ ಪೂಜಾರಿ
ಉಡುಪಿ, ನ.19: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸೇರಿದಂತೆ ಇಬ್ಬರನ್ನು ಕೋಟ ಪೊಲೀಸರು ಪೊಕ್ಸೊ ಕಾಯಿದೆಯಡಿ ಸೋಮವಾರ ಬಂಧಿಸಿದ್ದಾರೆ.
ಅತ್ಯಾಚಾರ ಎಸಗಿದ ಹಂಗಾರಕಟ್ಟೆಯ ನಿವಾಸಿ ಅಶೋಕ್ ಪೂಜಾರಿ(33) ಹಾಗೂ ಅದಕ್ಕೆ ಸಹಕಾರ ನೀಡಿದ ಪಾಂಡೇಶ್ವರದ ಹದ್ದಿನಬೆಟ್ಟು ನಿವಾಸಿ ನಿತ್ಯಾನಂದ (28) ಬಂಧಿತ ಆರೋಪಿಗಳು.
ಅಶೋಕ್ ಪೂಜಾರಿ ಅಂತರ್ಜಾತಿ ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಈತ ಕೆಲವು ಸಮಯಗಳ ಹಿಂದೆ ತನ್ನ ಪತ್ನಿಯನ್ನು ತ್ಯಜಿಸಿದ್ದ ಎಂದು ತಿಳಿದು ಬಂದಿದೆ. ನ.14ರಂದು ಈತ ಅಪ್ರಾಪ್ತ ವಯಸ್ಸಿನ ದಲಿತ ವಿದ್ಯಾರ್ಥಿಯನ್ನು ಪುಸಲಾಯಿಸಿ ಕಾರಿನಲ್ಲಿ ಹದ್ದಿನಬೆಟ್ಟುವಿನ ನಿತ್ಯಾನಂದನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆಂದು ದೂರಲಾಗಿದೆ.
ಬಾಲಕಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪರಹಣ, ಪೋಕ್ಸೊ ಹಾಗೂ ದಲಿತ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಕ್ರಿಮಿನಲ್ ಚಟುವಟಿಕೆಯ ಹಿನ್ನೆಲೆ ಹೊಂದಿರುವ ಅಶೋಕ್ ಪೂಜಾರಿ, ಅಕ್ರಮ ಮರಳು ಸಾಗಾಟ ಪ್ರಕರಣ ಆರೋಪಿಯಾಗಿದ್ದಾನೆ. ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ಡಿ.2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಸಂಸ ಖಂಡನೆ: ಅಪ್ರಾಪ್ತ ದಲಿತ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ವನ್ನು ದಸಂಸ(ಅಂಬೇಡ್ಕರ್ವಾದ) ತೀವ್ರವಾಗಿ ಖಂಡಿಸಿದೆ.
ದಲಿತ ದೌರ್ಜನ್ಯ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದರಿಂದಲೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಆದುದರಿಂದ ಜಿಲ್ಲೆಗೆ ಉತ್ತಮ ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಎಸ್.ಎಸ್.ಪ್ರಸಾದ್, ಜಿಲ್ಲಾ ಸಂಘಟನಾ ಸಂಚಾಲಕರಾದ ಗೋಪಾಲಕೃಷ್ಣ, ಭಾಸ್ಕರ ಮಾಸ್ತರ್, ಮಂಜುನಾಥ ಬಾಳ್ಕುದ್ರು, ಶ್ಯಾಮ್ ಸುಂದರ್ ತೆಕ್ಕಟ್ಟೆ, ಶ್ಯಾಮರಾಜ್ ಭಿರ್ತಿ, ಪರಮೇಶ್ವರ ಉಪ್ಪೂರು, ಅಣ್ಣಪ್ಪ ನಕ್ರೆ, ಶ್ರೀಧರ ಕುಂಜಿಬೆಟ್ಟು, ತಾಲೂಕು ಸಂಚಾಲಕರಾದ ಶಂಕರದಾಸ್, ಲೋಕೇಶ್ ಪಡುಬಿದ್ರಿ, ನಾಗರಾಜ್, ರಾಘವ, ರಾಜೇಂದ್ರನಾಥ್, ರಾಘ ವೇಂದ್ರ, ವಿಮಲ ಆಂಚನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.