'ಆರೋಗ್ಯ ಕರ್ನಾಟಕ ಶಿಬಿರಕ್ಕೆ ಅನುಮತಿ ಅಗತ್ಯ'
ಉಡುಪಿ, ನ.21:ಜಿಲ್ಲೆಯಲ್ಲಿ ಸಂಘ-ಸಂಸ್ಥೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಶಿಬಿರವನ್ನು ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೇ ನಡೆಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಜಿಲ್ಲಾಡಳಿತದಿಂದ ಅನುಮತಿ ಪಡೆದೇ ಸಂಘ-ಸಂಸ್ಥೆಗಳು / ಗ್ರಾಪಂಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಶಿಬಿರವನ್ನು ಈ ಕೆಳಕಂಡ ನಿಬಂಧನೆಗಳನ್ನು ಅನುಸರಿಸಿ ನಡೆಸಬೇಕಾಗಿದೆ.
ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದ ನಂತರವೇ ಶಿಬಿರಗಳನ್ನು ನಡೆಸ ಬಹುದು. ಶಿಬಿರದ ಸ್ಥಳ ಮತ್ತು ಸಮಯದ ಬಗ್ಗೆ ಕನಿಷ್ಟ 7 ದಿನಗಳ ಮೊದಲೇ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಜಿಲ್ಲಾ ಕುಷ್ಟರೋಗ ಅಧಿಕಾರಿಗೆ ತಿಳಿಸಬೇಕು. ಶಿಬಿರದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳ ವಿತರಣೆಗಾಗಿ ಫಲಾನುಭವಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಎ4 ಗಾತ್ರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗೆ ಕೇವಲ 10 ರೂ. ಮತ್ತು ಪಿವಿಸಿಗೆ 35 ರೂ. ನಿಗದಿ ಪಡಿಸಲಾಗಿದೆ. ಎಲ್ಲಾ ಶಿಬಿರಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವೆಚ್ಚದ ಬ್ಯಾನರ್‌ನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಶಿಬಿರವನ್ನು ನಡೆಸಲು ಜಿಲ್ಲಾಧಿಕಾರಿಗಳಿಗೆ 7 ದಿನಗಳ ಮುಂಚಿತವಾಗಿ ಅನುಮತಿ ಕೋರಿ ಪತ್ರವನ್ನು ಸಲ್ಲಿಸಬೇಕು.
ಶಿಬಿರ ನಡೆಸಲು ಇಚ್ಛಿಸುವ ಗ್ರಾಪಂ/ ಸಂಘ-ಸಂಸ್ಥೆಗಳು ಹತ್ತಿರದ ಅಧಿಕೃತ ಸಿಎಸ್‌ಸಿ (ಸಿಟಿಸನ್ ಸರ್ವಿಸ್ ಸೆಂಟರ್ ವಿಲೇಜ್ ಲೆವೆಲ್ ಎಂಟರ್‌ಪ್ರೈನರ್) ಮೂಲಕ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.