ಹಿರಾ ಶಾಲೆಯಲ್ಲಿ ಶುಚಿತ್ವ ಪಾಲನೆ ಕಾರ್ಯಕ್ರಮ

ಮಂಗಳೂರು, ನ. 21: ಬಬ್ಬುಕಟ್ಟೆಯ ಹಿರಾ ಪ್ರಾರ್ಥಮಿಕ ಶಾಲೆ ವತಿಯಿಂದ ಮಕ್ಕಳಲ್ಲಿ ಶುಚಿತ್ವ ಪಾಲನೆಯ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಬುಧವಾರ ಹಿರಾ ಸಭಾಂಗಣದಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ‘ಪೀಸ್ ಪಬ್ಲಿಕ್ ಸ್ಕೂಲ್’ನ ಶಾಲಾ ವಿಭಾಗದ ಕಾರ್ಯ ನಿರ್ವಾಹಕಿ ಮುಜೀದ ಅಂಜುಮ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಶುಚಿತ್ವವು ವಿಶ್ವಾಸದ ಅರ್ಧಾಂಶವಾಗಿದೆ. ವಿದ್ಯಾರ್ಥಿಗಳು ತಮ್ಮನ್ನು ತಾವು ಶುಚಿತ್ವ ಪಾಲನೆಯಲ್ಲಿ ತೊಡಗಿಸಿಕೊಳ್ಳಬೇಕು. ನಂತರ ಶಾಲೆ, ಮನೆಯಲ್ಲೂ ಅದನ್ನು ಪಾಲಿಸಬೇಕು. ನೀರಿನ ಮಿತವ್ಯಯದ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದರು.
ಹಿರಾ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗುಲ್ಶನ್, ಪೀಸ್ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದ ಕಾರ್ಯ ನಿರ್ವಾಹಕಿ ಸಂಧ್ಯಾ ಮಹೇಶ್, ಹಿರಾ ಸಂಸ್ಥೆಯ ನೈತಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ ಆಯಿಶಾ ಯು.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಾರಾ ಶಾಝಿಯ ಸ್ವಾಗತಿಸಿದರು. ವಿದ್ಯಾರ್ಥಿ ಉಮರ್ ಇಬ್ರಾಹೀಂ ವಂದಿಸಿದರು. ಶಿಕ್ಷಕಿ ಶಬಾನಾ ಕಾರ್ಯಕ್ರಮ ನಿರೂಪಿಸಿದರು.





