ಅಘೋಷಿತ 4,500 ಕೋ. ರೂ. ಚುನಾವಣಾ ಬಾಂಡ್ ಬಿಜೆಪಿ ಪಾಲಾಗಿದೆಯೇ ?
ಆಯೋಗಕ್ಕೆ ಇನ್ನೂ ವರದಿ ಸಲ್ಲಿಸಿಲ್ಲ ಕೇಸರಿ ಪಕ್ಷ
PTI
ಹೊಸದಿಲ್ಲಿ, ನ.21: 2018-19ರ ಆರ್ಥಿಕ ವರ್ಷದಲ್ಲಿ ಸುಮಾರು 6,000 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ಗಳು ಮಾರಾಟವಾಗಿದ್ದು, ಚುನಾವಣಾ ಆಯೋಗಕ್ಕೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸಲ್ಲಿಸಿದ ವಾರ್ಷಿಕ ವರದಿಯ ಅನುಸಾರ 4,500 ಕೋಟಿ ರೂ.ಗೂ ಅಧಿಕ ಮೊತ್ತದ ಬಾಂಡ್ಗಳು ಬಿಜೆಪಿ ಖಾತೆಗೆ ಜಮೆಯಾಗಿರುವ ಸಾಧ್ಯತೆಯಿದೆ ಎಂದು thequint.com ವರದಿ ಮಾಡಿದೆ.
ಬಿಜೆಪಿ ಇನ್ನೂ ತನ್ನ ಆಡಿಟ್ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ. ಕಾಂಗ್ರೆಸ್ ಚುನಾವಣಾ ಬಾಂಡ್ ರೂಪದಲ್ಲಿ 550 ಕೋಟಿ ರೂ. ಸಂಗ್ರಹಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಈಗಾಗಲೇ ತನ್ನ ವಾರ್ಷಿಕ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರೂ ಆಯೋಗ ಇನ್ನೂ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿಲ್ಲ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ತಿಳಿಸಿವೆ.
ಈ ವರ್ಷ 20 ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದೆ. ಇದರಲ್ಲಿ 5 ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ದೇಣಿಗೆ ಸಂಗ್ರಹಿಸಿದ್ದು ವಿವರ ಹೀಗಿದೆ: ಟಿಎಂಸಿ(97.28 ಕೋಟಿ ರೂ), ತೆಲಂಗಾಣ ರಾಷ್ಟ್ರೀಯ ಸಮಿತಿ(141.50 ಕೋಟಿ ರೂ), ಜೆಡಿಯು(35.25 ಕೋಟಿ ರೂ), ಬಿಜೆಡಿ (213.50 ಕೋಟಿ ರೂ), ವೈಎಸ್ಆರ್ ಕಾಂಗ್ರೆಸ್ ಪಕ್ಷ(99.84 ಕೋಟಿ ರೂ). ಈ ಐದು ಪಕ್ಷಗಳ ಒಟ್ಟು ಸಂಗ್ರಹ 587.37 ಕೋಟಿ ರೂ. ಆಗುತ್ತದೆ.
ಬಿಎಸ್ಪಿ, ಎಸ್ಪಿ, ಶಿರೋಮಣಿ ಅಕಾಲಿ ದಳ ಮತ್ತು ಆಮ್ ಆದ್ಮಿ ಪಕ್ಷ ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ಸ್ವೀಕರಿಸುವುದಿಲ್ಲ. ಆದ್ದರಿಂದ ಚುನಾವಣಾ ಆಯೋಗ ಪ್ರಕಟಿಸಿರುವ 6000 ಕೋಟಿ ರೂ. ಚುನಾವಣಾ ಬಾಂಡ್ನಲ್ಲಿ ಕಾಂಗ್ರೆಸ್ 550 ಕೋಟಿ, ಮೇಲೆ ತಿಳಿಸಿದ ಐದು ಪಕ್ಷಗಳು 587.37 ಕೋಟಿ ರೂ. ಸಂಗ್ರಹಿಸಿರುವುದಾಗಿ ತಿಳಿಸಿದೆ. ಹಾಗಿದ್ದರೆ ಉಳಿದ ಮೊತ್ತ ಬಿಜೆಪಿಯ ಪಾಲಾಗಿದೆಯೇ. ಬಿಜೆಪಿ ಇನ್ನೂ ಯಾಕೆ ಚುನಾವಣಾ ಆಯೋಗಕ್ಕೆ ವಾರ್ಷಿಕ ವರದಿ ಸಲ್ಲಿಸಿಲ್ಲ ಎಂದು ಸುದ್ದಿಸಂಸ್ಥೆಯೊಂದು ಪ್ರಶ್ನಿಸಿದೆ.
2017-18ರಲ್ಲಿ ಮಾರಾಟವಾದ ಒಟ್ಟು ಚುನಾವಣಾ ಬಾಂಡ್ಗಳಲ್ಲಿ ಬಿಜೆಪಿ 95%ದಷ್ಟನ್ನು (210 ಕೋಟಿ ರೂ) ಪಡೆದಿದೆ ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಲಾಗಿತ್ತು.
ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವವರ ಮಾಹಿತಿಯನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ನೀಡುವ ಅಗತ್ಯವಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್ಗಳು ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಪಾಯಕಾರಿ ಎಂದು ಸುದ್ದಿಸಂಸ್ಥೆ ವರದಿ ಮಾಡಿತ್ತು. ಈ ವರದಿಯ ಆಧಾರದಲ್ಲಿ, ಚುನಾವಣಾ ಬಾಂಡ್ಗಳ ಮಾರಾಟ ಪ್ರಕ್ರಿಯೆಗೆ ತಡೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ದಾಖಲಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, 2019ರ ಮೇ ತಿಂಗಳಿನೊಳಗೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿರುವ ದೇಣಿಗೆಯ ವಿವರವನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕೆಂದು ಸೂಚಿಸಿತ್ತು.
ಈ ವಿವರ ಸೀಲ್ ಮಾಡಿದ ಲಕೋಟೆಯಲ್ಲಿರುವ ಕಾರಣ ಸುಪ್ರೀಂಕೋರ್ಟ್ ಹೊರತುಪಡಿಸಿ ಉಳಿದ ಯಾರಿಗೂ ಇದರ ಮಾಹಿತಿ ಲಭ್ಯವಾಗಿಲ್ಲ.