Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಾನು ಮತ್ತು ಸಂಸ್ಕೃತ

ನಾನು ಮತ್ತು ಸಂಸ್ಕೃತ

ರಹಮತ್ ತರೀಕೆರೆರಹಮತ್ ತರೀಕೆರೆ22 Nov 2019 11:45 AM IST
share
ನಾನು ಮತ್ತು ಸಂಸ್ಕೃತ

ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಅಧ್ಯಾಪಕ ಫಿರೋಝ್ ಖಾನ್‌ರ ಪಾಠಕ್ಕೆ ಮುಸ್ಲಿಮರೆಂಬ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಬಹಿಷ್ಕಾರ ಹಾಕಿರುವ ಪ್ರಕರಣದ ಹಿನ್ನೆಲೆಯಲ್ಲಿ ಡಾ. ರಹಮತ್ ತರೀಕೆರೆಯವರು ಸಂಸ್ಕೃತದ ಬಗ್ಗೆ ತನ್ನ ಅನುಭವ, ಅರಿವುಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.

ಹೈಸ್ಕೂಲಿನಲ್ಲಿ ಕೆಲವು ಕಾಲ ನಾನು ಸಂಸ್ಕೃತದ ವಿದ್ಯಾರ್ಥಿಯಾಗಿದ್ದೆ. ಸಂಸ್ಕೃತ ತೆಗೆದುಕೊಂಡಿದ್ದ ನನ್ನ ಗೆಳೆಯರೆಲ್ಲ ಬ್ರಾಹ್ಮಣರಾಗಿದ್ದರು. ನನಗೆ ನೆನಪಿರುವಂತೆ ಸಂಸ್ಕೃತ ಮೇಷ್ಟರಾಗಿದ್ದ ಕೃಷ್ಣಮೂರ್ತಿಯವರಾಗಲಿ ನನ್ನ ಬ್ರಾಹ್ಮಣ ಸಹಪಾಠಿಗಳಾಗಲಿ ನನ್ನ ಇರುವಿಕೆಯನ್ನು ವಿಚಿತ್ರವಾಗಿ ಕಾಣಲಿಲ್ಲ. ಸಂಸ್ಕೃತ ತರಗತಿಯನ್ನು ನಾನು ಯಾಕೆ ತೊರೆದು ಕನ್ನಡದತ್ತ ಹೋದೆನೊ ಕಾಣೆ. ಆದರೆ ಸಂಸ್ಕೃತ ಕಲಿಯಬೇಕೆಂಬ ನನ್ನ ಅದಮ್ಯ ಆಸೆಯನ್ನು ಶಿವಮೊಗ್ಗೆಯಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಓದುವಾಗ ಪೂರೈಸಿಕೊಂಡೆ. ಮತ್ತೂರಿನಿಂದ ಬರುತ್ತಿದ್ದ ವಯೋವೃದ್ಧ ಸಂಸ್ಕೃತ ಪ್ರೊಫೆಸರ್ ವಿಷ್ಣು ನರಸಿಂಹಭಟ್ ಅವರು, ನನಗೆ ಕೂರಿಸಿಕೊಂಡು ಸಂಸ್ಕೃತ ಕಲಿಸಿದರು. ಅವರು ಶೃಂಗೇರಿಯ ಸುರಸರಸ್ವತಿ ಸಭಾ ಪರೀಕ್ಷೆಗಳನ್ನು ಕಟ್ಟಿಸಿದರು. ಅವುಗಳಲ್ಲಿ ಮೊದಲಿಗನಾಗಿ ಪಾಸಾದೆ. ನಾನು ಹೀಗೆ ಅರ್ಜಿಸಿದ ಸಂಸ್ಕೃತದ ಪ್ರಾಥಮಿಕ ಜ್ಞಾನವು, ನನಗೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ಗ್ರಹಿಸಲು ನೆರವಿನ ಅಮೂಲ್ಯ ಉಪಕರಣವಾಗಿ ಒದಗಿತು.

ಮುಂದೆ ಬ್ರಾಹ್ಮಣರ ಸಂಸ್ಥೆಯೆಂದೇ ಹೆಸರಾಗಿದ್ದ ಶಿವಮೊಗ್ಗೆಯ ದೇಶೀಯ ವಿದ್ಯಾಶಾಲಾ ಕಾಲೇಜಿಗೆ ಅಧ್ಯಾಪಕನಾಗಿ ಸೇರಬೇಕಾಯಿತು. ಈ ನೌಕರಿ ದೊರಕಿಸುವಲ್ಲಿ, ನನ್ನ ಚಿನ್ನದ ಪದಕಗಳಿಗಿಂತ ಮಿಗಿಲಾಗಿ, ಸಂಸ್ಕೃತ ಪರೀಕ್ಷೆಗಳಲ್ಲಿ ಪಡೆದ ಜಯಪತ್ರಗಳು ಮುಖ್ಯ ಪಾತ್ರವಹಿಸಿದವು ಎಂದು ಕಾಣುತ್ತದೆ. ಸಂದರ್ಶನ ತೆಗೆದುಕೊಂಡ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬದರಿನಾರಾಯಣ ಅವರು (ಮಾಜಿ ಶಿಕ್ಷಣ ಸಚಿವರು) ‘‘ಏನಪ್ಪಾ, ಮುಸಲ್ಮಾನನಾಗಿ ಸಂಸ್ಕೃತ ಓದಿಕೊಂಡಿದ್ದೀಯ. ಸಂತೋಷ ಸಂತೋಷ’’ ಎಂದು ಅಕ್ಕರೆದೋರಿದರು. ಶ್ರೀ ಅವಧಾನಿಯವರೂ ಗಣೇಶ ಜೋಯಿಸರೂ ಅಧ್ಯಾಪಕರಾಗಿದ್ದ ಕನ್ನಡ ವಿಭಾಗವನ್ನು ಸೇರಿಕೊಂಡ ನನಗೂ ಮುನೀರ್ ಅವರಿಗೂ, ಶಿವಮೊಗ್ಗೆಯ ಗೆಳೆಯರು ಮುನೀರಭಟ್ಟ-ರಹಮತ್ ಶಾಸ್ತ್ರಿ ಎಂದು ಹೆಸರಿಟ್ಟಿದ್ದರು.

ಭಾರತದಲ್ಲಿ ಭಾಷೆ ಮತ್ತು ಅದರೊಳಗಿನ ಜ್ಞಾನವನ್ನು ಪಡೆಯುವುದಕ್ಕೆ ಹಲವಾರು ಸಾಮಾಜಿಕ-ಧಾರ್ಮಿಕ ತೊಡಕುಗಳಿವೆ. ಆದರೆ ಈ ಲಕ್ಷ್ಮಣ ರೇಖೆಗಳಾಚೆ ಭಾಷಾಕಲಿಕೆ ಮತ್ತು ಜ್ಞಾನದ ವಿನಿಮಯವು ಸತತವಾಗಿ ನಡೆಯುತ್ತಲೇ ಬಂದಿದೆ. ಬಿಜಾಪುರದ ಸುಲ್ತಾನ ಎರಡನೇ ಇಬ್ರಾಹೀಂ ಆದಿಲಶಾಹಿಯು ಹಿಂದೂಶಾಸ್ತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದನು. ಸ್ವತಃ ಸರಸ್ವತೀ ಆರಾಧಕನಾಗಿದ್ದನು. ಸರಸ್ವತಿ ಮತ್ತು ಗಣಪತಿ ಪ್ರಾರ್ಥನೆಯಿಂದ ತನ್ನ ‘ಕಿತಾಬೆ ನವರಸ’ ಕೃತಿಯನ್ನು ಆರಂಭಿಸಿದನು. ಮೊಗಲ್ ರಾಜಕುಮಾರ ದಾರಾಶುಕೊನಂತೂ ಪ್ರಸಿದ್ಧ ಉಪನಿಷತ್ ವಿದ್ವಾಂಸನಾಗಿದ್ದನು. ಜೀವಮಾನವಿಡೀ ಅವನ್ನು ಫಾರಸಿಗೆ (1657) ಅನುವಾದಿಸಿ, ‘ಸಿರ್ರೆ ಅಕಬರ್’ (ಮಹಾರಹಸ್ಯ) ಹೆಸರಲ್ಲಿ ಪ್ರಕಟಿಸಿದನು. ವೇದಾಂತ ಮತ್ತು ಸೂಫಿಸಂನಲ್ಲಿರುವ ಸಮಾನ ಅಂಶಗಳನ್ನು ವಿವೇಚಿಸುವ ‘ಮಜ್ಮಉಲ್ ಬಹರೈನ್’ (ಕಡಲುಗಳ ಸಂಗಮ) ಎಂಬ ಕೃತಿ ರಚಿಸಿದನು. ನಮ್ಮಕಾಲದಲ್ಲಿ ಉಪನಿಷತ್ತುಗಳಲ್ಲಿ ಅಪಾರ ವಿದ್ವತ್ತನ್ನು ಪಡೆದಿರುವವರು ಎಂದರೆ, ಶ್ರೀ ಎಂ ಉರುಫ್ ಮುಮ್ತಾಝ್ ಅಲಿಖಾನ್. ಇವರು ಮದನಪಲ್ಲಿಯಲ್ಲಿ ತಮ್ಮ ಸತ್ಸಂಗ ಫೌಂಡೇಶನ್ ಆಶ್ರಮದಲ್ಲಿರುತ್ತಾರೆ.

ಶಿಶುನಾಳ ಶರೀಫರ ಹಾಡುಗಳನ್ನು ಗಮನಿಸಿದರೆ ಅವರಿಗೆ ಸಂಸ್ಕೃತದಲ್ಲಿ ಒಳ್ಳೆಯ ಪ್ರವೇಶವಿತ್ತು, ಮಾತ್ರವಲ್ಲ ಪುರಾಣ ಶಾಸ್ತ್ರಗಳ ತಿಳಿವೂ ಚೆನ್ನಾಗಿತ್ತು. ಇದಕ್ಕೆ ಅವರ ಗುರುಗಳಾದ ಗೋವಿಂದಭಟ್ಟರೂ ಕಾರಣವಿರಬೇಕು. ಇಷ್ಟೇ ಸಂಸ್ಕೃತ ತಿಳಿವನ್ನು ನಾನು ಕಂಡಿದ್ದು ಗೋನಾರೆ ರಾಮದಾಸರಲ್ಲಿ. ಬಡೇಸಾಬರು ಹಂಪಿಗೆ ಬಂದು ರಾಮದಾಸರಲ್ಲಿ ದೀಕ್ಷೆ ಪಡೆದು ರಾಮದಾಸ ಎಂಬ ಹೆಸರನ್ನು ಪಡೆದವರಾಗಿ, ರಾಮನ ಮೇಲೆ 777 ಕೀರ್ತನೆ ರಚಿಸಿದರು. ಅವರು ಸಮಾಧಿಯಾದ ಲಿಂಗದಹಳ್ಳಿಯಲ್ಲಿ (ದೇವದುರ್ಗ ತಾ.) ಅವರ ಚಿತ್ರಪಟವನ್ನು ಅಲ್ಲಿನ ಬ್ರಾಹ್ಮಣರು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ, ಪುಣ್ಯತಿಥಿ ಆಚರಿಸುವ ಪದ್ಧತಿಯಿದೆ. ಇಂಥದೇ ಪುರಾಣ ಜ್ಞಾನವನ್ನು ಕದರಮಂಡಲಗಿಯ ಜನಪದ ಗಾಯಕ ದಿ. ಅಲ್ಲಾಭಕ್ಷರಲ್ಲಿ ಕಂಡಿದ್ದೆ. ಅವರ ಮನೆಯ ತುಂಬ ಮಹಾಭಾರತ ರಾಮಾಯಣ ಶಿವಪುರಾಣಗಳಿದ್ದವು.

ಈ ಸೀಮೋಲ್ಲಂಘನೆ ಉರ್ದು ಫಾರಸಿ ಅರಬಿ ವಿಷಯದಲ್ಲಿಯೂ ನಡೆದಿದೆ. ಮೊಗಲರ ಕಾಲದಲ್ಲಿ ಅನೇಕ ಬ್ರಾಹ್ಮಣರು ಅರಬಿ ಫಾರಸಿ ಪಂಡಿತರಾಗಿದ್ದರು. ಇವತ್ತಿಗೂ ಭಾರತದ ಫಾರಸಿ ಕಾವ್ಯದಲ್ಲಿ ಇರಾನಿನ ಫಾರಸಿ ಲೇಖಕರು ಮನ್ನಿಸುವುದು ಮೊಗಲ್ ಚಕ್ರವರ್ತಿ ಶಹಾಜಹಾನನ ಆಸ್ಥಾನ ಪಂಡಿತನಾಗಿದ್ದ ಚಂದ್ರಭಾನ್ ಬ್ರಾಹ್ಮನ್ (17ನೇ ಶತ.) ಬರೆದ ಕಾವ್ಯವನ್ನು ಮಾತ್ರ. ಇದನ್ನು ನನಗೆ ಜಾಮಿಯಾ ಮಿಲಿಯಾದ ಉರ್ದು ಪ್ರಾಧ್ಯಾಪಕ ಅಸಘರ ವಜಾಹತ್ ತಮ್ಮ ಸಂದರ್ಶನದಲ್ಲಿ ತಿಳಿಸಿದರು. ಇರಾನಿನ ವಿಶ್ವವಿದ್ಯಾನಿಲಯಗಳಲ್ಲಿ ಫಾರಸಿಯ ಜ್ಞಾತಿಭಾಷೆಯಾದ ಸಂಸ್ಕೃತವನ್ನು ಅಭ್ಯಾಸ ಮಾಡಲಾಗುತ್ತಿತ್ತು. ನಮ್ಮ ಗಂಗಾವತಿಯಲ್ಲಿದ್ದ ರಾಘವೇಂದ್ರರಾವ್ -ಮಾಧ್ವಬ್ರಾಹ್ಮಣ ಹಿನ್ನೆಲೆಯಿಂದ ಬಂದವರು- ಫಾರಸಿ ಉರ್ದುವಿನ ದೊಡ್ಡ ಪಂಡಿತರಾಗಿದ್ದರು. ‘ಜಜ್ಬ್’ ಕಾವ್ಯನಾಮದಿಂದ ಉರ್ದು ಸಾಹಿತ್ಯದಲ್ಲಿ ಪ್ರಖ್ಯಾತರಾದರು.

ಹೀಗೆ ನೂರಾರು ನಿದರ್ಶನಗಳನ್ನು ಹೇಳುತ್ತ ಹೋಗಬಹುದು. ಭಾರತ ತನ್ನೆಲ್ಲ ಕಷ್ಟಗಳ ನಡುವೆ ಸಂಕರ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದೇ ಹೀಗೆ. ಇದು ಹಾಕಿಕೊಟ್ಟ ಪರಂಪರೆಯಲ್ಲಿ ನಾಡನ್ನೆಲ್ಲ ಅಲೆದು ಶಾಕ್ತ ಆರೂಢ ನಾಥ ಶರಣ ಪಂಥಗಳಮೇಲೆ ನಾನು ಕಿಂಚಿತ್ ಸಂಶೋಧನೆ ಮಾಡಿದೆ. ಭಾರತದಲ್ಲಿ ಜಾತಿಮತಧರ್ಮಗಳ ಎಲ್ಲ ಗೋಡೆಗಳ ಒಳಗೂ ಕಿಂಡಿಯನ್ನು ಕೊರೆದು ಭಾಷೆ ಧರ್ಮ ಸಂಸ್ಕೃತಿ ಜ್ಞಾನವನ್ನು ಹಂಚಿಕೊಳ್ಳುವ ಪಡೆದುಕೊಳ್ಳುವ ಕೆಲಸ ಮುಂದೆ ಕೂಡ ನಡೆಯಬಹುದು. ಆದರೆ ಅವುಗಳ ಗತಿ ಖಂಡಿತಕ್ಕೂ ಕ್ಷೀಣವಾಗುತ್ತದೆ. ಈಗ ಭಾರತದಲ್ಲಿ ಧರ್ಮಗಳು ಮುಷ್ಟಿಬಿಗಿ ಹಿಡಿದು ಕಾದಾಡುವ ಕಾಲ. ತಮ್ಮ ವಿಶಿಷ್ಟತೆ ಭಿನ್ನಮತಗಳ ಜತೆಗೆ ಒಟ್ಟಿಗೆ ಕುಳಿತು ತೆರೆದ ಮನದಿಂದ ಸಂವಾದ ಮಾಡುವ ಕಾಲವಲ್ಲ. ಭಾರತ ತೀವ್ರತರವಾಗಿ ಬದಲಾಗುತ್ತಿದೆ. ಅದು ಮುಂದೆ ಹಿಡಿಯಲಿರುವ ಹಾದಿಯನ್ನು ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಅಧ್ಯಾಪಕ ಫಿರೋಝ್ ಖಾನ್‌ರ ಪಾಠಕ್ಕೆ ಬಹಿಷ್ಕಾರ ಹಾಕಿರುವ ಪ್ರಕರಣವು ಸಾಂಕೇತಿಕವಾಗಿ ಸೂಚಿಸುತ್ತಿದೆ. ಕಡೆಗೆ ಈ ನಾಡು ಎಲ್ಲಿಗೆ ಹೋಗಿ ಮುಟ್ಟಬಹುದು?

share
ರಹಮತ್ ತರೀಕೆರೆ
ರಹಮತ್ ತರೀಕೆರೆ
Next Story
X