ಉದ್ಧವ್ ಠಾಕ್ರೆ ವಿರುದ್ಧ ದೂರು ದಾಖಲು: ಕಾರಣವೇನು ಗೊತ್ತಾ?

ಮುಂಬೈ, ನ.22: ಹಿಂದುತ್ವದ ಹೆಸರಿನಲ್ಲಿ ಮತಯಾಚಿಸಿ ನಂತರ ತನ್ನ ಚುನಾವಣಾ ಪೂರ್ವ ಮೈತ್ರಿಯಂತೆ ಬಿಜೆಪಿ ಜತೆ ಸರಕಾರ ರಚಿಸದೆ ಶಿವಸೇನೆ ಮತದಾರರನ್ನು ವಂಚಿಸಿದೆ ಎಂದು ದೂರಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಇತರ ಇಬ್ಬರು ನಾಯಕರ ವಿರುದ್ಧ ಬಿಜೆಪಿ ಬೆಂಬಲಿಗ ರತ್ನಾಕರ್ ಚೌರೆ ಎಂಬವರು ಔರಂಗಾಬಾದ್ ಜಿಲ್ಲೆಯ ಬೇಗಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರನ್ನು ಪೊಲೀಸರು ಸ್ಪೆಷಲ್ ಬ್ರ್ಯಾಂಚಿಗೆ ವರ್ಗಾಯಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಉದ್ಧವ್ ಠಾಕ್ರೆ, ಔರಂಗಾಬಾದ್ ಸೆಂಟ್ರಲ್ ಕ್ಷೇತ್ರದಿಂದ ಚುನಾಯಿತ ಶಿವಸೇನೆ ಶಾಸಕ ಪ್ರದೀಪ್ ಜೈಸ್ವಾಲ್ ಹಾಗೂ ಮಾಜಿ ಸಂಸದ ಚಂದ್ರಕಾಂತ್ ಖೈರೆ ಹಿಂದುತ್ವದ ಹೆಸರಿನಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಕೂಟಕ್ಕೆ ಮತಗಳನ್ನು ಯಾಚಿಸಿದ್ದರು ಎಂದು ದೂರುದಾರ ಆರೋಪಿಸಿದ್ದಾರೆ.
ಅವರ ಅಪೀಲಿನಂತೆಯೇ ತಾನು ಮತ್ತು ಕುಟುಂಬ ಸದಸ್ಯರು ಬಿಜೆಪಿ-ಸೇನೆ ಮೈತ್ರಿ ಅಭ್ಯರ್ಥಿಗೆ ಮತ ನೀಡಿದ್ದೆವು. ಆದರೆ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಶಿವಸೇನೆ ಬಿಜೆಪಿ ಜತೆಗಿನ ಮೈತ್ರಿ ಮುರಿದಿರುವುದು ವಂಚನೆ ಮಾಡಿದಂತೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಉದ್ಧವ್ ಠಾಕ್ರೆ ಹಾಗೂ ಇತರ ಇಬ್ಬರು ಶಿವಸೇನೆ ನಾಯಕರ ವಿರುದ್ಧ ವಂಚನೆ ಪ್ರಕರಣ ದಾಖಲಿಸಬೇಕೆಂದೂ ಅವರು ಮನವಿ ಮಾಡಿದ್ದಾರೆ.
ಜೈಸ್ವಾಲ್ ಆಯ್ಕೆಯನ್ನು ರದ್ದುಗೊಳಿಸುವಂತೆ ಹಾಗೂ ತಾನು ನೀಡಿದ ಮತವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳುವಂತೆ ಕೋರಿ ಚುನಾವಣಾ ಆಯೋಗಕ್ಕೂ ಪತ್ರ ಬರೆಯುವುದಾಗಿ ದೂರುದಾರ ಹೇಳಿಕೊಂಡಿದ್ದಾರೆ.