ನಕಲಿ ಸಿಬಿಐ ಅಧಿಕಾರಿ ಬಂಧನ: ದುಬಾರಿ ಬೆಲೆಯ 2 ಕಾರುಗಳು ಜಪ್ತಿ

ಬೆಂಗಳೂರು, ನ.22: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಅಧಿಕಾರ ಎಂದು ಹೇಳಿಕೊಂಡು, ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ನಕಲಿ ಅಧಿಕಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ದುಬಾರಿ ಬೆಲೆಯ 2 ಕಾರು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ನಿವಾಸಿ ಅಭಿಲಾಷ್(34) ಎಂಬಾತ ಬಂಧಿತ ಆರೋಪಿ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ವಾಸವಿದ್ದ ಅಭಿಲಾಷ್, ಶ್ರೀಮಂತ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ಅವರ ಹಿನ್ನೆಲೆ, ವ್ಯವಹಾರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ, ತಾನೂ ವಾಣಿಜ್ಯ ವಿಭಾಗದ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು, ದಾಳಿ ನಡೆಸುತ್ತೇನೆ ಎಂದು ಬೆದರಿಕೆ ಹಾಕಿ, ಹಣ ವಸೂಲಿ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ದೇವನಹಳ್ಳಿಯ ನಿವಾಸಿಯೋರ್ವನನ್ನು ಹೊಟೇಲ್‌ಗೆ ಕರೆದು, ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದ. ನಂತರ ಅವರ ಹಿನ್ನೆಲೆ ಕಲೆ ಹಾಕಿ 24 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು, ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಸದ್ಯ ನಕಲಿ ಅಧಿಕಾರಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆರೋಪಿ ಪದವಿ ಮುಗಿಸಿ, ಹೆಚ್ಚಿನ ಹಣ ಸಂಪಾದನೆಗಾಗಿ ಅಡ್ಡ ದಾರಿ ಹಿಡಿದಿದ್ದ ಎನ್ನುವುದು ಬೆಳಕಿಗೆ ಬಂದಿದ್ದು, ಈತನ ಬಳಿಯಿದ್ದ, ಎರಡು ದುಬಾರಿ ಕಾರುಗಳನ್ನು ಜಪ್ತಿ ನಡೆಸಿ, ತನಿಖೆ ಮುಂದುವರೆಸಲಾಗಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.







