'ಕ್ಯಾನ್ಸರ್‌ನಂತೆ ಹರಡಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ಅಗತ್ಯ'
ಕರ್ನಾಟಕ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ

ಉಡುಪಿ, ನ. 22: ಭ್ರಷ್ಟಾಚಾರವು ಇಂದು ಸಮಾಜದಲ್ಲಿ ಕ್ಯಾನ್ಸರ್ ರೀತಿ ಯಲ್ಲಿ ಹರಡಿಕೊಂಡಿದೆ. ಇದರ ವಿರುದ್ಧ ಯುವ ಸಮುದಾಯ ಚಳವಳಿ ನಡೆಸಿ ಬುಡದಿಂದಲೇ ಕಿತ್ತು ಹಾಕಬೇಕು. ಭ್ರಷ್ಟಾಚಾರವನ್ನು ಸಮಾಜ ಎಂದಿಗೂ ಸಹಿಸಿಕೊಳ್ಳಬಾರದು. ಭ್ರಷ್ಟಾಚಾರದ ಹಣವನ್ನು ಮನೆಯವರು ಕೂಡ ತಿರಸ್ಕರಿಸ ಬೇಕು. ಆಗ ಮಾತ್ರ ಅದನ್ನು ಪರಿಣಾಮಕಾರಿಯಾಗಿ ತೊಲಗಿಸಲು ಸಾಧ್ಯ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನೂತನ ಗ್ರಂಥಾಲಯ ಬ್ಲಾಕ್ ‘ಜ್ಞಾನ ಸಿಂಧು’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜ್ಞಾನ ಎಂಬುದು ಬಹಳ ದೊಡ್ಡ ಶಕ್ತಿ ಮತ್ತು ಬಲ. ಬೇರೆ ಎಲ್ಲ ರೀತಿಯ ಸಂಪತ್ತಿಗಿಂತ ಜ್ಞಾನ ಸಂಪತ್ತೇ ಬಹಳ ವೌಲ್ಯಯುತವಾದ ಆಸ್ತಿಯಾಗಿದೆ. ಈ ಜ್ಞಾನ ಸಂಪತ್ತನ್ನು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ಪಡೆದುಕೊಳ್ಳ ಬೇಕು. ಅದಕ್ಕಾಗಿ ವಿದ್ಯಾರ್ಥಿ ಗಳು ಕಾಲೇಜು ಅಥವಾ ಸಾರ್ವಜನಿಕ ಗ್ರಂಥಾ ಲಯಗನ್ನು ಬಳಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಜೀವನ ಬಹಳಷ್ಟು ಅಮೂಲ್ಯವಾಗಿದ್ದು, ಒಂದು ಕ್ಷಣವನ್ನು ವ್ಯರ್ಥ ಮಾಡದೆ ಕಲಿಯುವುದಕ್ಕೆ ಮೀಸಲಿಡಬೇಕು. ಹೀಗೆ ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆ ನೀಡಿದರೆ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಜ್ಞಾನವನ್ನು ವಿಸ್ತರಿಸಿಕೊಳ್ಳು ವುದರಿಂದ ವ್ಯಕ್ತಿತ್ವವನ್ನು ಕೂಡ ನಿರ್ಮಾಣ ಮಾಡ ಬಹುದಾಗಿೆ ಎಂದು ಅವರು ಅಭಿಪ್ರಾಯ ಪಟ್ಟರು.
ವಕೀಲ ವೃತ್ತಿ ಸಮಾಜದಲ್ಲಿ ಬಹಳ ಪ್ರಭಾವ ಬೀರುವ ವೃತ್ತಿಯಾಗಿದೆ. ಬಡವರು, ಕಾರ್ಮಿಕರಿಂದ ಹಿಡಿದು ಅಧಿಕಾರಿಗಳು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳವರೆಗೆ ಎಲ್ಲರೂ ಕೂಡ ವಕೀಲರ ಕಕ್ಷಿದಾರರಾಗಿ ಬರುತ್ತಾರೆ. ವೃತ್ತಿಯಲ್ಲಿ ಆಸಕ್ತಿ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಉತ್ತಮ ವಕೀಲರಾಗಿ ಸಮಾಜದಲ್ಲಿ ಗೌರವ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಇಂದು ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರು ಗ್ರಂಥಾಲಯಗಳಿಗೆ ಹೋಗುತ್ತಿಲ್ಲ. ಇದರಿಂದ ಗ್ರಂಥಾಲಯವು ಕೇವಲ ಪುಸ್ತಕ, ಕಟ್ಟಡಗಳಾಗಿ ಮಾತ್ರ ಉಳಿಯುವ ಸಾಧ್ಯತೆ ಇದೆ. ಆಳವಾದ ಜ್ಞಾನ ಹೊಂದಿದರೆ ಮಾತ್ರ ಉತ್ತಮ ವಕೀಲನಾಗಲು ಸಾಧ್ಯ. ಯಾವುದೇ ಉದ್ಯೋಗವನ್ನಾದರೂ ಬಹಳ ಆಸಕ್ತಿಯಿಂದ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆಯನ್ನು ಮಣಿಪಾಲ ಡಾ.ಟಿ.ಎಂ.ಪೈ ಫೌಂಡೇಶನ್‌ನ ಕಾರ್ಯದರ್ಶಿ ಟಿ.ಅಶೋಕ್ ಪೈ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಣಿಪಾಲ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊ.ಡಾ.ಮು ವೀರ ರಾಘವನ್ ಉಪಸ್ಥಿತರಿದ್ದರು.
ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ ಸ್ವಾಗತಿಸಿದರು. ವಿದಾರ್ಥಿನಿ ಶ್ರೀಲಕ್ಷ್ಮೀ ಕಾಮತ್ ವಂದಿಸಿದರು. ಜಾನೆ ವೆನಿಸಾ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಇಡೀ ರಾಜ್ಯಕ್ಕೆ ಮಾದರಿ: ಡಿಸಿ
ಉಡುಪಿ ಜಿಲ್ಲೆಯ ಆಡಳಿತ ವ್ಯವಸ್ಥೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ನಾಗರಿಕ ಸೇವೆಯಲ್ಲಿ ಉಡುಪಿ ಜಿಲ್ಲೆ ಇಡೀ ರಾಜ್ಯಕ್ಕೆ ಮೊದಲನೆ ಸ್ಥಾನದಲ್ಲಿದೆ. ಜಿಲ್ಲೆಯ 250 ನಾಗರಿಕ ಸೇವಾ ಕೇಂದ್ರಗಳಲ್ಲಿ 70 ಸೇವೆಗಳನ್ನು ನೀಡಲಾಗುತ್ತಿದೆ. 10 ವಿವಿಧ ಕಂದಾಯ ಸೇವೆಯಲ್ಲೂ ಕೂಡ ಮೊದಲನೆ ಸ್ಥಾನದಲ್ಲಿದೆ. ಸಕಾಲ ಸೇವೆಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ತಿಂಗಳ ಅಂತ್ಯಕ್ಕೆ ಮೊದಲ ಸ್ಥಾನ ಬರುವ ಪ್ರಯತ್ನದಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಉಡುಪಿ ಜಿಲ್ಲೆಯ ಕೆಳಹಂತದಲ್ಲಿ ಕೆಲವೊಂದು ಲೋಪದೋಷಗಳು ಇಂದಿಗೂ ಇವೆ. ಗ್ರಾಮ ಪಂಚಾಯತ್ ಹಾಗೂ ಗ್ರಾಮ ಕರಣಿಕ ಮಟ್ಟದಲ್ಲಿ ಹಲವು ಸಮಸ್ಯೆಗಳು ಕಂಡುಬರುತ್ತಿವೆ. ಅವುಗಳನ್ನು ಸರಿಪಡಿಸಿಕೊಂಡು ಉತ್ತಮ ಆಡಳಿತ ನೀಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ಮುಂದುವರೆಯುವ ಪ್ರಯತ್ನ ಮಾಡಲಾಗುವುದು ಎಂದರು.







