ಉಚ್ಚಾಟಿತರಿಗೆ ಸೋಲಿನ ಪರಾಮರ್ಶೆಯ ನೈತಿಕತೆ ಇಲ್ಲ: ಸುರತ್ಕಲ್ ಬ್ಲಾಕ್ ಕಾಂಗ್ರೆಸ್
"ಬಣ ಕಟ್ಟಿ ಪಕ್ಷದ ಸೋಲಿಗೆ ಕಾರಣರಾದವರ ಬಗ್ಗೆ ಶಿಸ್ತು ಕ್ರಮ"

ಮಂಗಳೂರು, ನ.23: ಪಕ್ಷಕ್ಕೆ ರಾಜೀನಾಮೆ ನೀಡಿದವರು ಹಾಗೂ ಪಕ್ಷದಿಂದ ಉಚ್ಚಾಟನೆಗೊಂಡವರು ಮನಪಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ನಡೆಸುವ ನೈತಿಕತೆ ಹೊಂದಿಲ್ಲ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಕ್ಷದಲ್ಲಿದ್ದು ಅಧಿಕಾರವನ್ನು ಅನುಭವಿಸಿ ಈಗ ತಮ್ಮದೇ ಆದ ಬಣ ಕಟ್ಟಿಕೊಂಡು ಪಕ್ಷದ ಸೋಲಿಗೆ ಕಾರಣರಾದವರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾ ಸಮಿತಿ ತೀರ್ಮಾನಿಸಲಿದೆ ಎಂದರು.
ಉಂಡ ಮನೆಗೆ ದ್ರೋಹ ಬಗೆದ ಸ್ವಾರ್ಥಿಗಳಿಂದ ಪಕ್ಷದ ಸೋಲಿಗೆ ಕಾರಣವಾಗಿದೆ. ಆದರೆ ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಮಂಗಳೂರು ಮಹಾನಗರ ಪಾಲಿಕೆ ಚುನಾಣೆಯಲ್ಲಿ ಸುರತ್ಕಲ್ ಬ್ಲಾಕ್‌ನಲ್ಲಿ ಮತ ಗಳಿಕೆಯಲ್ಲಿ ಸುಧಾರಣೆಯಾಗಿದೆ. ಒಂದೆರಡು ವಾರ್ಡ್‌ಗಳಲ್ಲಿ ಬಿಟ್ಟರೆ, ಬಹುತೇಕ ವಾರ್ಡ್‌ಗಳಲ್ಲಿ ಅತೀ ಕಡಿಮೆ ಮತಗಳ ಅಂತರದಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಸೋಲಾಗಿದೆ. ಜನರ ತೀರ್ಮಾನಕ್ಕೆ ತಲೆಬಾಗುತ್ತೇವೆ ಎಂದರು.
ಪಕ್ಷದಲ್ಲಿ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಅದರದ್ದೇ ಆದ ಮಾನದಂಡ ಇದೆ. ಸುರತ್ಕಲ್ ಬ್ಲಾಕ್‌ನಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಹೊರತುಪಡಿಸಿದರೆ ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ಮಾಜಿ ಶಾಸಕ ಮೊಯ್ದೀನ್ ಬಾವ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡಿದವರನ್ನು ಖಂಡಿಸುವುದಾಗಿ ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕುರಿತಂತೆ ನಿರಂತರ ಶ್ರಮಿಸಲು ಪಣ ತೊಟ್ಟಿದ್ದೇವೆ ಎಂದರು.
ಬಂಡಾಯದಿಂದಾಗಿ ಸುರತ್ಕಲ್ ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲಾಯಿತೇ ಎಂಬ ಪ್ರಶ್ನೆಗೆ, ಬಹುತೇಕವಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಇರುವ ಸರಕಾರಕ್ಕೆ ಪೂರಕವಾಗಿ ಮತದಾರರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತ ಹಾಕುತ್ತಾರೆ. ಕೆಲವರು ಬಂಡುಕೋರರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೆ ಅವರಿಗೆ ಎರಡಂಕೆಯಲ್ಲಿ ಮಾತ್ರವೇ ಮತ ಗಳಿಸಲು ಸಾಧ್ಯವಾಗಿರುವುದು. ಹಿಂದೆ ಅವರು ಪಕ್ಷಕ್ಕಾಗಿ ದುಡಿದಿದ್ದರು. ಪಕ್ಷದಿಂದ ಅವರು ಅಧಿಕಾರವನ್ನೂ ಪಡೆದುಕೊಂಡಿದ್ದಾರೆ. ಹಾಗಿದ್ದರೂ ಇದೀಗ ಪಕ್ಷವನ್ನು ಸಂಘಟಿಸಲು ಶ್ರಮಿಸಿದ ನಾಯಕರ ವಿರುದ್ಧವೇ ಆರೋಪ ಮಾಡುವುದನ್ನು ಖಂಡಿಸುವುದಾಗಿ ಹೇಳಿದರು.
ಮಾಜಿ ಮೇಯರ್ ಗುಲ್ಜಾರ್ ಬಾನು ಅವರಿಗೆ ಟಿಕೆಟ್ ದೊರಕಿದೆ ಎಂದು ಹೇಳಿ ಕೊನೆ ಕ್ಷಣದಲ್ಲಿ ನಿರಾಕರಿಸಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದಿಂದ ಗೆದ್ದು ಮೇಯರ್ ಆಗಿದ್ದ ಅವರಿಗೆ ಆ ವಾರ್ಡ್‌ನಲ್ಲಿ ಸಾಮಾನ್ಯ ಅಭ್ಯರ್ಥಿಗೆ ಮೀಸಲಾತಿ ಬಂದಿದ್ದರೂ ಮಹಿಳೆಯಾಗಿ ಅವರಿಗೆ ಅವಕಾಶ ನೀಡಲಾಗಿತ್ತು. ಅದರಿಂದಾಗಿಯೇ ಅಲ್ಲಿ ಎಸ್‌ಡಿಪಿಐ ಬೆಳೆಯಲು ಕಾರಣವಾಯಿತು ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಮಾಜಿ ಉಪ ಮೇಯರ್ ಬಶೀರ್ ಬೈಕಂಪಾಡಿ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಕಾರ್ಪೊರೇಟರ್ ಅನಿಲ್ ಕುಮಾರ್, ಮಲ್ಲಿಕಾರ್ಜುನ್ ಕೋಡಿಕಲ್ ಉಪಸ್ಥಿತರಿದ್ದರು.
ನನ್ನ ಪತ್ನಿಯ ರಾಜಕೀಯ ಹಿನ್ನೆಲೆಯಿಂದ ಟಿಕೆಟ್ ದೊರಕಿದ್ದು: ಕಬೀರ್
‘‘ಮಾಜಿ ಶಾಸಕ ಮೊಯ್ದೀನ್ ಬಾವ ಅವರು ನನಗೆ ಐದು ಲಕ್ಷ ರೂ. ಬಿಲ್ ಪಾವತಿಗೆ ಬಾಕಿ ಇದ್ದ ಕಾರಣ ನನ್ನ ಪತ್ನಿಗೆ ಟಿಕೆಟ್ ನೀಡಲಾಗಿದೆ ಎಂಬ ಆರೋಪವನ್ನು ಮಾಡಲಾಗಿದೆ. ಇದು ಸುಳ್ಳು. ನನ್ನ ಪತ್ನಿ ರಾಜಕೀಯ ಹಿನ್ನೆಲೆಯನ್ನು ಹೊಂದಿದವರು. ಜನಪ್ರಿಯ ಶಾಸಕರಾಗಿ ಗುರುತಿಸಿಕೊಂಡಿದ್ದ ದಿವಗಂತ ಉಮರಬ್ಬ ಅವರ ಪುತ್ರಿ. ಕಳೆದ ಮನಪಾ ಚುನಾವಣೆಯಲ್ಲಿಯೇ ನನಗೆ ಅವಕಾಶ ಸಿಗಬೇಕಿತ್ತು. ಹಾಗೆಂದು ನಾವು ಪಕ್ಷಾಂತರ ಮಾಡಿಲ್ಲ. ಪಕ್ಷಕ್ಕಾಗಿ ಹಿಂದಿನ ಅಭ್ಯರ್ಥಿಯ ಜತೆ ಕೆಲಸ ಮಾಡಿದ್ದೇವೆ ಎಂದು ಕಬೀರ್ ಪ್ರತಿಕ್ರಿಯಿಸಿದರು.







