ನ.24ರಂದು ಇಶ್ಕೇ ಮದೀನಾ ಮೀಲಾದ್ ರ‍್ಯಾಲಿ
ಎಸ್‍ಕೆಜೆಎಂಸಿಸಿ 60ನೇ ವಾರ್ಷಿಕ ಪ್ರಚಾರ ಸಂಗಮ
ಬಂಟ್ವಾಳ, ನ. 22: ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾ ಸಮಿತಿ ಹಾಗೂ ಮದ್ರಸ ವಿದ್ಯಾರ್ಥಿಗಳ ಒಕ್ಕೂಟ ಎಸ್‍ಕೆಎಸ್‍ಬಿವಿ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ರ ಜನ್ಮದಿನಾಚರಣೆ ಪ್ರಯುಕ್ತ "ಇಶ್ಕೇ ಮದೀನಾ" ಬೃಹತ್ ಮಿಲಾದ್ ಸಂದೇಶ ಜಾಥಾವು ನ. 24ರಂದು ನಡೆಯಲಿದೆ ಎಂದು ಎಸ್‍ಕೆಜೆಎಂಸಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ತಿಳಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.30ಕ್ಕೆ ಗೂಡಿನಬಳಿಯಿಂದ ಆರಂಭಗೊಂಡ ಜಾಥಾ ಮಿತ್ತಬೈಲಿನಲ್ಲಿ ಸಮಾಪ್ತಿಗೊಳ್ಳಲಿದ್ದು, ಸಮಸ್ತ ಮತ್ತು ಅಧೀನ ಸಂಘಟನೆಗಳ ನೇತಾರರು, ಕಾರ್ಯಕರ್ತರು, ಹಿತೈಷಿಗಳು, ಮುಅಲ್ಲಿಮರು, ವಿದ್ಯಾರ್ಥಿಗಳು ಸಂಗಮಿಸುವ ಜಾಥಾದಲ್ಲಿ ದಫ್ ಸ್ಕೌಟ್ ಮುಂತಾದವು ವಿಶೇಷ ಮೆರಗು ನೀಡಲಿದೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧೀನ ಸಂಸ್ಥೆ ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರ ಒಕ್ಕೂಟ ಇದಾಗಿದೆ ಎಂದರು.
ಸಮಸ್ತ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಸುಮಾರು 10 ಸಾವಿರದಷ್ಟು ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರ ಒಕ್ಕೂಟ ಸಮಸ್ತ ಕೇರಳ ಜಂಇಯ್ಯತುಲ್ 10 ಮುಅಲ್ಲಿಮೀನ 60ನೇ ವಾರ್ಷಿಕ ಮಹಾ ಸಮ್ಮೇಳನವು ಡಿ. 27ರಿಂದ ಕೇರಳದ ಕೊಲ್ಲಂನಲ್ಲಿ ನಡೆಯಲಿದ್ದು, ಪ್ರಸ್ತುತ ಸಮ್ಮೇಳನದ ಪ್ರಚಾರ ಸಂಗಮವು ಸಂಜೆ 4ಕ್ಕೆ ಸಂದೇಶ ಜಾಥಾದ ಸಮಾರೋಪದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ, ಶಂಸುದ್ದೀನ್ ದಾರಿಮಿ ಪಮ್ಮಲೆ, ಇರ್ಷಾದ್ ದಾರಿಮಿ ಮಿತ್ತಬೈಲು, ಹಾರೂನ್ ರಶೀದ್ ಬಂಟ್ವಾಳ, ಉಬೈದುಲ್ಲಾ ಹಾಜಿ ಗೂಡಿನಬಳಿ, ಅಬ್ದುರ್ರಶೀದ್ ಯಮಾನಿ, ಇಸ್ರಾರ್ ಗೂಡಿನಬಳಿ ಹಾಜರಿದ್ದರು.







