ಪುರಾತನ ನಾಣ್ಯಗಳ ವಿಶೇಷ ಪ್ರದರ್ಶನ ಉದ್ಘಾಟನೆ

ಮಂಗಳೂರು, ನ.23:ವಿಶ್ವ ಪಾರಂಪರಿಕ ಸಪ್ತಾಹದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಶ್ರಯದಲ್ಲಿ ಬಿಜೈ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ನಡೆದ ಪುರಾತನ ನಾಣ್ಯಗಳ ವಿಶೇಷ ಪ್ರದರ್ಶನವನ್ನು ಶನಿವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಉದ್ಘಾಟಿಸಿದರು.
ದೇಶದಲ್ಲಿ ಆಳಿದ ವಿವಿಧ ರಾಜರುಗಳ ಕಾಲದ ಪುರಾತನ ನಾಣ್ಯಗಳ ಪ್ರದರ್ಶನ ಇಲ್ಲಿವೆ. ಅಂದರೆ ಟಿಪ್ಪು ಸುಲ್ತಾನ್, ಹೈದರಾಲಿ, ಮೈಸೂರು ಸಂಸ್ಥಾನ, ವಿಜಯನಗರ ಸಾಮ್ರಾಜ್ಯ, ಈಸ್ಟ್ ಇಂಡಿಯಾ ಕಂಪೆನಿ, ಡೆಲ್ಲಿ ಸುಲ್ತಾನೇಟ್, ಗುಜರಾತ್ ಸುಲ್ತಾನೇಟ್, ರಾಣಿ ವಿಕ್ಟೋರಿಯಾ ಆಳ್ವಿಕೆ ಸಂದರ್ಭದ ನಾಣ್ಯ ಸಹಿತ ಸುಮಾರು 1,000ಕ್ಕೂ ಅಧಿಕ ನಾಣ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಆಯಾಯ ಕಾಲದಲ್ಲಿ ಆಳಿದ ರಾಜರುಗಳ ಭಾವಚಿತ್ರವು ನಾಣ್ಯಗಳಲ್ಲಿ ಮುದ್ರಿತವಾಗಿರುವುದು ನಾಣ್ಯಗಳ ಮತ್ತೊಂದು ವಿಶೇಷವಾಗಿತ್ತು.
ಪ್ರತಿ ನಾಣ್ಯಗಳ ಕೆಳಭಾಗದಲ್ಲಿ ನಾಣ್ಯದ ಗಾತ್ರ, ತೂಕ, ಮೆಟಲ್‌ನ್ನು ಬರೆಯಲಾಗಿತ್ತು. 1835ರಿಂದ 1947ರವರೆಗೆ ಬಳಸುತ್ತಿದ್ದ ಬೆಳ್ಳಿ ನಾಣ್ಯಗಳು, ಆನಂತರದ ಶೇ.50 ಬೆಳ್ಳಿಲೇಪಿತ ನಾಣ್ಯಗಳು, 17-18ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ಹಿತ್ತಾಳೆಯ ನಾಣ್ಯಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. 35 ಪೈಸೆ, 50 ಪೈಸೆ, 1 ರೂ. ಮತ್ತಿತರ ಮುಖಬೆಲೆಯ ನಾಣ್ಯ ಸಂಗ್ರಹ ಕೂಡಾ ಪ್ರದರ್ಶನದಲ್ಲಿ ಗಮನ ಸೆಳೆದಿತ್ತು. 40-50 ಮಿಲಿಗ್ರಾಂ ತೂಕವುಳ್ಳ ಅತಿ ಸಣ್ಣ ನಾಣ್ಯದ ಸಂಗ್ರಹ ಈ ಪ್ರದರ್ಶನದಲ್ಲಿತ್ತು.
ಒಂದೆಡೆ ನಾಣ್ಯಗಳ ಪ್ರದರ್ಶನವಾದರೆ, ಇನ್ನೊಂದೆಡೆ ವಿದ್ಯಾ ಕಿಶೋರ್ ಬಾಗ್ಲೋಡಿ ಅವರಿಂದ ಇತಿಹಾಸ ಸಾರುವ ಚಿತ್ರ ಮಾಹಿತಿ ಪ್ರದರ್ಶನವಿತ್ತು. ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಪ್ರದರ್ಶನದಲ್ಲಿ ಹಲವರು ಆಗಮಿಸಿ ವಿಶೇಷ ಪುರಾತನ ನಾಣ್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಿನ ಮಕ್ಕಳಿಗೆ ಪುರಾತನ ನಾಣ್ಯ, ಅಂಚೆಚೀಟಿ ಸಂಗ್ರಹದ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಪ್ರದರ್ಶನಗಳು ಪ್ರಯೋಜನಕಾರಿಯಾಗಲಿದೆ. ಇತಿಹಾಸವನ್ನು ಪ್ರಾಯೋಗಿಕವಾಗಿ ಕಲಿಯಲು ಇದರಿಂದ ಸಾಧ್ಯವಾಗುತ್ತದೆ ಎಂದು ನಾಣ್ಯ ಸಂಗ್ರಹಕಾರ ನಾಗರಾಜ್ ಶೇಟ್ ಹೇಳಿದರು.






.jpg)
.jpg)

