ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ: ಕುಮಾರಸ್ವಾಮಿ

ಬೆಂಗಳೂರು, ನ. 23: ಉಪಚುನಾವಣೆಯಲ್ಲಿ ಮತದಾರರು 500 ರೂ., ಸಾವಿರ ರೂ.ಗೆ ಮಾರುಹೋಗದೆ ಕ್ಷೇತ್ರದ ಅಭಿವೃದ್ಧಿ ಮತ್ತು ಶಾಶ್ವತ ಬದುಕು ಕಟ್ಟಿಕೊಡುವವರ ಬಗ್ಗೆ ಆಲೋಚಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ.
ಶನಿವಾರ ಇಲ್ಲಿನ ಯಶವಂತಪುರ ಕ್ಷೇತ್ರದ ಕಗ್ಗಲಿಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಜವರಾಯಿಗೌಡ ಎರಡು ಬಾರಿ ಸೋಲು ಕಂಡಿದ್ದು, ಮತ್ತೆ ಕಣದಲ್ಲಿದ್ದಾರೆ ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಾನು ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಯಶವಂತಪುರ ಕ್ಷೇತ್ರಕ್ಕೆ ಒಂದು ವರ್ಷದಲ್ಲಿ 339 ಕೋಟಿ ರೂ.ಅನುದಾನ ನೀಡಿದ್ದೇನೆ. ಲೋಕೋಪಯೋಗಿ ಇಲಾಖೆಯಿಂದ 59 ಕೋಟಿ ರೂ., ಪಂಚಾಯತ್ ರಾಜ್ ಇಲಾಖೆಯಿಂದ 19 ಕೋಟಿ ರೂ.ಅನುದಾನ ನೀಡಿದ್ದೇನೆ ಎಂದರು.
ಸಿಎಂ ಆಗಿದ್ದ ವೇಳೆ ನಾನು ಅವರ ಕೈಗೆ ಸಿಗುತ್ತಿರಲಿಲ್ಲ ಎಂದು ದೂರಿದ್ದಾರೆ. ಆದರೆ, ನಾನು ಅವರ ವೈಯಕ್ತಿಕ ಸ್ವಾರ್ಥಕ್ಕೆ ಹಣ ಮಾಡಿಕೊಳ್ಳಲು ಸಹಕಾರ ನೀಡಿಲ್ಲ ಎಂದು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದ ಕುಮಾರಸ್ವಾಮಿ, ಬಿಜೆಪಿ ಶಾಸಕರೇ ಕುಮಾರಸ್ವಾಮಿ ಸಿಎಂ ಆಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಾರೆಂದು ಉಲ್ಲೇಖಿಸಿದರು.







